ರೈತ ಹೋರಾಟ | ತೀವ್ರಗೊಳಿಸಲು ನಿರ್ಧಾರ; ವಿನೇಶ್ ಫೋಗಟ್ ಪಾಲ್ಗೊಳ್ಳುವ ಸಾಧ್ಯತೆ
ಹರಿಯಾಣ-ದೆಹಲಿ ಗಡಿಯಲ್ಲಿ 200 ದಿನಗಳ ಪ್ರತಿಭಟನೆಯನ್ನು ಪೂರ್ಣಗೊಳಿಸಿರುವ ರೈತರು, ಆಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹರಿಯಾಣ ಮೂಲದ ಒಲಿಂಪಿಯನ್ ವಿನೇಶ್ ಫೋಗಟ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಖಾನೌರಿ, ಶಂಭು ಮತ್ತು ರತನ್‌ಪುರ ಗಡಿಗಳಲ್ಲಿ ಶನಿವಾರ ಪ್ರತಿಭಟನೆ ನಡೆಯಲಿದ್ದು, ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಅಭಿಯಾನವನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಮೋದಿ ಸರ್ಕಾರದ ದೂಷಣೆ: ದೆಹಲಿಗೆ ಯಾತ್ರೆಗೆ ಅಧಿಕಾರಿಗಳು ಫೆಬ್ರವರಿ 13 ರಂದು ಅಡ್ಡಿಪಡಿಸಿದ ಬಳಿಕ ರೈತರು ಶಂಭು ಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ʻಮೋದಿ ಸರಕಾರ ತಮ್ಮ ಸ್ಥೈರ್ಯವನ್ನು ಪರೀಕ್ಷಿಸುತ್ತಿದೆ. ತಮ್ಮ ಬೇಡಿಕೆಗಳನ್ನು ಈವರೆಗೆ ಈಡೇರಿಸಿಲ್ಲ. ನಾವು ಮತ್ತೊ ಮ್ಮೆ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಹೊಸ ಘೋಷಣೆಗಳನ್ನು ಮಾಡಲಾಗುತ್ತದೆ,ʼ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದರು.
ಕಂಗನಾ ವಿರುದ್ಧ ಕ್ರಮಕ್ಕೆ ಆಗ್ರಹ: ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಬಿಜೆಪಿಯನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತರು ಸಕ್ರಿಯ ಪಾತ್ರ ವಹಿಸುವ ಸುಳಿವು ನೀಡಿದ್ದಾರೆ.