ರೈತ ಹೋರಾಟ | ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದ ಭದ್ರತೆ
x

ರೈತ ಹೋರಾಟ | ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದ ಭದ್ರತೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ʼದೆಹಲಿ ಚಲೋʼವನ್ನು ತಡೆಯಲು ಕೇಂದ್ರ ಸರ್ಕಾರ ರಾಜಧಾನಿಯ ಸುತ್ತಲೂ ಬಿಗಿ ಬಂದೋಬಸ್ತ್‌ ಏರ್ಪಡಿಸಿದೆ.


ಹೊಸದಿಲ್ಲಿ, ಫೆ.14: ಪ್ರತಿಭಟನಾನಿರತ ರೈತರು ರಾಷ್ಟ್ರ ರಾಜಧಾನಿಗೆ ಮೆರವಣಿಗೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಕೇಂದ್ರ ದೆಹಲಿ ಮತ್ತು ಹರಿಯಾಣದ ಗಡಿ ಭಾಗಗಳಲ್ಲಿ ಸಂಚಾರವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ಸಿಂಘು (ದೆಹಲಿ-ಸೋನಿಪತ್) ಮತ್ತು ಟಿಕ್ರಿ ಗಡಿಗಳಲ್ಲಿ (ದೆಹಲಿ-ಬಹದ್ದೂರ್‌ಗಢ) ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲೂ ಗಲಭೆ ನಿಗ್ರಹಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿಯ ಮೇಲೆ ಕಣ್ಣಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಿಂಘು ಮತ್ತು ಟಿಕ್ರಿ ಗಡಿಗಳು ಹಾಗೂ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್‌ಗಳು, ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್ ಗೋಡೆಗಳನ್ನು ಅಳವಡಿಸಲಾಗಿದ್ದು, ವಿವಿಧ ಹಂತಗಳಲ್ಲಿ ತಡೆ ಇರಿಸಲಾಗಿದೆ.

ಅಗತ್ಯ ಬಿದ್ದರೆ ಗಡಿ ಭಾಗಗಳಲ್ಲಿ ಮತ್ತು ಕೇಂದ್ರ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ "ದೆಹಲಿ ಚಲೋ" ಆಂದೋಲನವನ್ನು ಮುನ್ನಡೆಸುತ್ತಿವೆ.

ಮಂಗಳವಾರ, ಪಂಜಾಬ್‌ನ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದ್ದು, ಹರ್ಯಾಣ-ಪಂಜಾಬ್‌ನ ಎರಡು ಗಡಿ ಕೇಂದ್ರಗಳಲ್ಲಿ ಪ್ರತಿಭಟನಾಕಾರರು ದೆಹಲಿಗೆ ಹೋಗುವುದನ್ನು ತಡೆಯಲು ಸ್ಥಾಪಿಸಲಾದ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದ್ದರು. ತಡರಾತ್ರಿಯವರೆಗೂ ಅವರನ್ನು ಹರ್ಯಾಣ ಪೊಲೀಸರು ಪಂಜಾಬ್-ಹರಿಯಾಣ ಗಡಿಯಲ್ಲಿ ತಡೆದಿದ್ದರು.

ಗಡಿಯಲ್ಲಿ ಮತ್ತು ದೆಹಲಿಯ ಹಲವು ಭಾಗಗಳಲ್ಲಿ ಬ್ಯಾರಿಕೇಡಿಂಗ್‌ನಿಂದಾಗಿ ಮಂಗಳವಾರ ರಾಷ್ಟ್ರೀಯ ರಾಜಧಾನಿ ಪ್ರದೇಶದ ಹಲವು ಸ್ಥಳಗಳಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು.

ಮಧ್ಯ ದೆಹಲಿಯ ಒಂಬತ್ತು ಮೆಟ್ರೋ ನಿಲ್ದಾಣಗಳ ಕೆಲವು ಗೇಟ್‌ಗಳನ್ನು ಸಂಜೆಯವರೆಗೆ ಮುಚ್ಚಿದ್ದರಿಂದ ಮೆಟ್ರೋ ಪ್ರಯಾಣಿಕರು ಕೂಡಾ ತೊಂದರೆಗಳನ್ನು ಎದುರಿಸಬೇಕಾಯಿತು.

ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಕೆಂಪು ಕೋಟೆ ಸಂಕೀರ್ಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ಒಂದು ತಿಂಗಳವರೆಗೆ ನಿಷೇಧಿತ ಆದೇಶಗಳನ್ನು ಹೊರಡಿಸಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ, ಮೆರವಣಿಗೆಗಳು ಅಥವಾ ರ್ಯಾಲಿಗಳು ಮತ್ತು ಜನರನ್ನು ಸಾಗಿಸುವ ಟ್ರ್ಯಾಕ್ಟರ್-ಟ್ರಾಲಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

2020 ರ ಪ್ರತಿಭಟನೆಯ ಸಮಯದಲ್ಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರು, ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಧರಣಿ ನಡೆಸಿದ್ದರು. ಅವರು ಆಗಸ್ಟ್ 2020 ರಿಂದ ಡಿಸೆಂಬರ್ 2021 ರವರೆಗೆ ಪ್ರತಿಭಟನೆ ಮುಂದುವರಿದಿತ್ತು.

Read More
Next Story