ರೈತರಿಗೆ ಎಂಎಸ್‌ಪಿ, ಯುವಜನರಿಗೆ ಉದ್ಯೋಗ ಬೇಕು-ರಾಹುಲ್
x

ರೈತರಿಗೆ ಎಂಎಸ್‌ಪಿ, ಯುವಜನರಿಗೆ ಉದ್ಯೋಗ ಬೇಕು-ರಾಹುಲ್


ಜೈಪುರ, ಏಪ್ರಿಲ್‌ 11 - ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೇಳುತ್ತಿದ್ದಾರೆ; ಯುವಜನರು ಉದ್ಯೋಗ ಹುಡುಕುತ್ತಿದ್ದಾರೆ ಮತ್ತು ಮಹಿಳೆಯರು ಹಣದುಬ್ಬರದಿಂದ ಪರಿಹಾರ ಬಯಸುತ್ತಿದ್ದಾರೆ. ಆದರೆ, ಅವರ ಅಳಲು ಯಾರೂ ಕೇಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ʻಮುಂಬರುವ ಲೋಕಸಭೆ ಚುನಾವಣೆಯು ಸಂವಿಧಾನ ಮತ್ತು ಪ್ರಜಾ ಪ್ರಭುತ್ವವನ್ನು ರಕ್ಷಿಸುತ್ತದೆ. ಹಿಂದುಳಿದವರು, ದಲಿತರು, ಬುಡಕಟ್ಟುಗಳು ಮತ್ತು ಸಾಮಾನ್ಯ ವರ್ಗದ ಬಡವರ ಚುನಾವಣೆ ಇದಾಗಿದೆʼ ಎಂದರು.

ʻಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಚುನಾವಣೆ ಬಾಂಡ್‌ಗಳ ಮೂಲಕ ಕೈಗಾರಿಕೋದ್ಯಮಿಗಳಿಂದ ಹಣ ಪಡೆದುಕೊಂಡಿದೆ. ಚುನಾವಣೆ ದೇಶದ ಬಡಜನರು ಮತ್ತು 22-25 ಶತಕೋಟ್ಯಧಿಪತಿಗಳ ನಡುವಿನ ಯುದ್ಧʼ ಎಂದು ಹೇಳಿದರು. ʻದೇಶದ ಎರಡು ದೊಡ್ಡ ಸಮಸ್ಯೆಗಳೆಂದರೆ ನಿರುದ್ಯೋಗ ಮತ್ತು ಹಣದುಬ್ಬರ. ಆದರೆ, ಇವುಗಳನ್ನು ಮಾಧ್ಯಮಗಳು ಪ್ರಸ್ತಾಪಿಸು ತ್ತಿಲ್ಲ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ತೆರಿಗೆ ಪಾವತಿಸುತ್ತಿದ್ದಾರೆ. ಪ್ರಧಾನಿ 15-20 ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಆ ಹಣದಿಂದ 24 ವರ್ಷ ಕಾಲ ನರೇಗಾ ಕೂಲಿ ಪಾವತಿಸಲು ಬಳಸಬಹುದಿತ್ತುʼ ಎಂದು ರಾಹುಲ್‌ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಎತ್ತಿ ತೋರಿಸಿದ ಅವರು, ಅಧಿಕಾರಕ್ಕೆ ಬಂದ ತಕ್ಷಣ ಅವೆಲ್ಲವನ್ನೂ ಅನ್ವಯಿಸಲಾಗುವುದುʼ ಎಂದು ಹೇಳಿದರು. ಬಿಕಾನೇರ್‌ನ ಅಭ್ಯರ್ಥಿ ಗೋವಿಂದ್ ರಾಮ್ ಮೇಘವಾಲ್ ಮತ್ತು ಗಂಗಾನಗರ ಕ್ಷೇತ್ರದ ಕುಲದೀಪ್ ಇಂದೋರಾ ಅವರನ್ನು ಬೆಂಬಲಿಸಿ ಸಭೆ ಆಯೋಜಿಸಲಾಗಿತ್ತು.

Read More
Next Story