ಪ್ರಧಾನಿ ಹೇಳಿಕೆ ʻಸುಳ್ಳು,ಅತಿರೇಕʼ: ಚಿದಂಬರಂ ವಾಗ್ದಾಳಿ
ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಮರಿಗೆ ಶೇ.15 ಬಜೆಟ್ : ಮೋದಿ
ಹಿಂದಿನ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಬಜೆಟ್‌ನಲ್ಲಿ ಶೇ.15ರಷ್ಟು ಮೀಸಲಿಡಲು ಬಯಸಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಇದೊಂದು ʻಸಂಪೂರ್ಣ ಸುಳ್ಳುʼ ಮತ್ತು ಪ್ರಧಾನಿ ಹೇಳಿಕೆಗಳ ʻವಿಲಕ್ಷಣತೆ ದಿನೇದಿನೇ ಹೆಚ್ಚುತ್ತಿದೆʼ ಎಂದು ಟೀಕಿಸಿದ್ದಾರೆ.
ʻತಾವು ಹಿಂದೂ-ಮುಸ್ಲಿಂ ಎಂಬ ವಿಭಜನೆ ಮಾಡಿದ್ದರೆ, ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಪ್ರಧಾನಿ ಮಂಗಳವಾರ ಹೇಳಿದ್ದರು. ಆದರೆ, ಮರುದಿನವೇ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವ ಎಂದಿನ ಆಟ ಆಡಿದರುʼ ಎಂದು ಚಿದಂಬರಂ ಹೇಳಿದರು.
ʻಪ್ರಧಾನಿಯವರ ಹೇಳಿಕೆಗಳ ವಿಲಕ್ಷಣತೆ ದಿನೇದಿನೇ ಹೆಚ್ಚುತ್ತಿದೆ ಮತ್ತು ಅವರ ಭಾಷಣ ಬರಹಗಾರರು ಸಮತೋಲನ ಕಳೆದುಕೊಂಡಿದ್ದಾರೆ ಎಂದು ತೋರಿಸುತ್ತದೆʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ʻಡಾ. ಮನಮೋಹನ್ ಸಿಂಗ್ ಅವರು ಕೇಂದ್ರ ಬಜೆಟ್‌ನ ಶೇ.15ನ್ನು ಮುಸ್ಲಿಮರಿಗೆ ಖರ್ಚು ಮಾಡುವ ಯೋಜನೆ ರೂಪಿಸಿದ್ದರು ಎಂಬ ಪ್ರಧಾನಿಯವರ ಆರೋಪ ಸಂಪೂರ್ಣ ಸುಳ್ಳು. ಈ ಆರೋಪ ಅತಿರೇಕದ್ದು. ಕೇವಲ ಭ್ರಮೆ,ʼ ಎಂದು ಹೇಳಿದರು.
ʻಸಂವಿಧಾನದ 112 ನೇ ವಿಧಿಯು ಒಂದು ವಾರ್ಷಿಕ ಹಣಕಾಸು ಹೇಳಿಕೆಯನ್ನು ಮಾತ್ರ ಪರಿಗಣಿಸುತ್ತದೆ; ಅದೇ ಕೇಂದ್ರ ಬಜೆಟ್. ಹೀಗಿರುವಾಗ ಎರಡು ಬಜೆಟ್‌ಗಳು ಎಲ್ಲಿ ಇರುತ್ತವೆ? ಚುನಾವಣೆ ಪ್ರಚಾರದ ಇನ್ನುಳಿದ ದಿನಗಳಲ್ಲಾದರೂ ಪ್ರಧಾನಿ ಸುಳ್ಳು ಆರೋಪ ಮತ್ತು ಅತಿರೇಕದ ಹೇಳಿಕೆ ನೀಡುವುದನ್ನು ತೊರೆಯುತ್ತಾರೆ ಎಂದು ಭಾವಿಸುತ್ತೇನೆ,ʼ ಎಂದರು. ʻಭಾರತೀಯರು ಮಾತ್ರವಲ್ಲ; ಇಡೀ ಜಗತ್ತು ಅವರ ಹೇಳಿಕೆಗಳನ್ನು ವೀಕ್ಷಿಸುತ್ತಿದೆ ಮತ್ತು ವಿಶ್ಲೇಷಿಸುತ್ತಿದೆ. ಇಂಥ ಹೇಳಿಕೆಗಳು ದೇಶಕ್ಕೆ ಕೀರ್ತಿ ತರುವುದಿಲ್ಲʼ ಎಂದು ಚಿದಂಬರಂ ಹೇಳಿದರು.
ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಿಂಪಲ್‌ಗಾಂವ್ ಬಸವಂತ್‌ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ, ʻಬಜೆಟ್ ನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವುದು ಅಪಾಯಕಾರಿ. ಕಾಂಗ್ರೆಸ್ ಆಡಳಿತ ಮುಸ್ಲಿಮರಿಗೆ ಬಜೆಟ್‌ನಲ್ಲಿ ಶೇ.15 ಮೀಸಲಿಡಲು ಬಯಸಿತ್ತುʼ ಎಂದು ಆರೋಪಿಸಿದ್ದರು.