EY staffer’s death | ಸಂಸತ್ತಿನಲ್ಲಿ ಕೆಲಸದ ಸಮಯ ಕುರಿತು ಪ್ರಸ್ತಾಪ: ತರೂರ್
x

EY staffer’s death | ಸಂಸತ್ತಿನಲ್ಲಿ ಕೆಲಸದ ಸಮಯ ಕುರಿತು ಪ್ರಸ್ತಾಪ: ತರೂರ್


ತಿರುವನಂತಪುರಂ ಸಂಸದ ಶಶಿ ತರೂರ್ ಅವರು 40 ಗಂಟೆಗಳ ಕೆಲಸದ ವಾರವನ್ನು ಸೂಚಿಸಿದ್ದಾರೆ. ಕೆಲಸದ ಹೊರೆಯಿಂದ ಇವೈ(ಅರ್ನ್ಸ್ಟ್ ಆಂಡ್ ಯೂಗ್) ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್(26) ಅವರ ಸಾವಿನ ಹಿನ್ನೆಲೆಯಲ್ಲಿ ಸಂಸದರಿಂದ ಈ ಸಲಹೆ ಬಂದಿದೆ.

ತಾವು ಅನ್ನಾ ಅವರ ತಂದೆ ಸಿಬಿ ಜೋಸೆಫ್ ಅವರೊಂದಿಗೆ ʻಭಾವನಾತ್ಮಕ ಮತ್ತು ಹೃದಯಸ್ಪರ್ಶಿʼ ಮಾತುಕತೆ ನಡೆಸಿದೆ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ. ಇವೈನಲ್ಲಿ ʻನಾಲ್ಕು ತಿಂಗಳ ಅಪಾರ ಒತ್ತಡದ ಏಳು ದಿನಗಳ ವಾರ, ದಿನಕ್ಕೆ14 ಗಂಟೆಗಳ ಕೆಲಸದ ಬಳಿಕ ಅನ್ನಾ ಹೃದಯ ಸ್ತಂಭನದಿಂದ ನಿಧನರಾದರು ಎಂದು ತರೂರ್ ಬರೆದಿದ್ದಾರೆ.

ಶಾಸನ ಅಗತ್ಯ: ಖಾಸಗಿ ಇಲ್ಲವೇ ಸಾರ್ವಜನಿಕ ವಲಯವಾಗಲಿ, ವಾರಕ್ಕೆ ಐದು ದಿನ, ದಿನಕ್ಕೆ ಎಂಟು ಗಂಟೆ ಮೀರದಂತಹ ಕೆಲಸದ ಸಮಯವನ್ನು ಸಂಸತ್ತಿನ ಮೂಲಕ ಶಾಸನಬದ್ಧಗೊಳಿಸಬೇಕು ಎಂದು ಸಿಬಿ ಜೋಸೆಫ್ ಅವರು ಸೂಚಿಸಿದ್ದಾರೆ. ಇದು ಸಮರ್ಪಕ. ಕೆಲಸದ ಸ್ಥಳದಲ್ಲಿ ಅಮಾನವೀಯತೆಯನ್ನು ಕಾನೂನಿನ ಮೂಲಕ ನಿರ್ಬಂಧಿಸಬೇಕು; ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಬೇಕು,ʼ ಎಂದು ತರೂರ್‌ ಬರೆದಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಕೆಲಸ ಬಿಡಲು ಸೂಚನೆ: ಕೇರಳದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ, ಪುಣೆಯ ಇವೈ ಕಚೇರಿಯಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿ, ಜುಲೈನಲ್ಲಿ ನಿಧನರಾದರು. ಮಗಳು ಮಧ್ಯರಾತ್ರಿ 12.30ರವರೆಗೆ ಕೆಲಸ ಮಾಡುತ್ತಿದ್ದಳು ಎಂದು ಸಿಬಿ ಜೋಸೆಫ್ ಮಾಧ್ಯಮಗಳಿಗೆ ತಿಳಿಸಿದ್ದರು.

ತಾವು ಮತ್ತು ಪತ್ನಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದರು. ಆದರೆ, ಆಕೆ ನಿರಾಕರಿಸಿದ್ದಳು. ಕೆಲಸದ ಒತ್ತಡ ಕುರಿತು ಸಹಾಯಕ ವ್ಯವಸ್ಥಾಪಕರಿಗೆ ಹೇಳಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾತ್ರಿಯಲ್ಲಿಯೂ ಕೆಲಸ ಮಾಡಲು ಒತ್ತಾಯಿಸಿದ್ದರು ಎಂದು ಹೇಳಿದರು.

ಕಂಪನಿ ವಿರುದ್ಧ ಮೊಕದ್ದಮೆ ಇಲ್ಲ: ಇವೈ ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಅನ್ನಾಳ ತಾಯಿ ಅನಿತಾ ಅವರು ಬರೆದ ಪತ್ರ ವೈರಲ್ ಆದ ನಂತರವಷ್ಟೇ ಕಂಪನಿ ಪ್ರತಿಕ್ರಿಯಿಸಿದೆ ಎಂದು ಕುಟುಂಬ ಆರೋಪಿಸಿದೆ.

ʻಕಂಪನಿ ವಿರುದ್ಧ ಮೊಕದ್ದಮೆ ಹೂಡುವ ಆಲೋಚನೆ ಇಲ್ಲ. ಆದರೆ, ತಮ್ಮ ಮಗಳು ಮತ್ತು ಅವರಂತಹವರು ಇಂಥ ಕಷ್ಟ ಅನುಭವಿಸಬೇಕೆಂದು ಬಯಸುವುದಿಲ್ಲ. ಕಾರ್ಪೊರೇಟ್ ಕಂಪನಿಗಳಲ್ಲಿ ಆರಂಭಿಕರು ಇಂಥ ಪರಿಸ್ಥಿತಿ ಎದುರಿಸುವುದನ್ನು ನಾವು ಬಯಸುವುದಿಲ್ಲ,ʼ ಎಂದು ಸಿಬಿ ಜೋಸೆಫ್‌ ಹೇಳಿದರು.

ಕಂಪನಿ ಪ್ರತಿಕ್ರಿಯೆ: ಅನ್ನಾ ಅವರ ಸಾವಿಗೆ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇವೈ ಬುಧವಾರ ಹೇಳಿಕೆ ನೀಡಿದ್ದು, ಅನ್ನಾ ಅವರ ದುರಂತ ಮತ್ತು ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಹೇಳಿದೆ. ಅನ್ನಾ ತನ್ನ ಸದಸ್ಯ ಸಂಸ್ಥೆಗಳಲ್ಲಿ ಒಂದಾದ ಎಸ್‌ಆರ್ ಬಾಟ್ಲಿಬಾಯ್‌ನಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ.

ಮೆಮಾನಿ ಗುರುವಾರ ಪ್ರತ್ಯೇಕ ಹೇಳಿಕೆ ನೀಡಿದ್ದು, ಅನ್ನಾ ಅವರ ಅಂತ್ಯಕ್ರಿಯೆಯಲ್ಲಿ ಕಂಪನಿಯಿಂದ ಯಾರೂ ಭಾಗವಹಿಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಸಾಮರಸ್ಯದ ಕೆಲಸದ ವಾತಾವರಣ ನಿರ್ಮಿಸುವವರೆಗೆ ವಿಶ್ರಮಿಸುವುದಿಲ್ಲ. ಇದು ಹಿಂದೆಂದೂ ಸಂಭವಿಸಿಲ್ಲ; ಮತ್ತೆ ಎಂದಿಗೂ ಸಂಭವಿಸುವುದಿಲ್ಲ,ʼ ಎಂದು ಹೇಳಿದರು.

Read More
Next Story