
ಚೀನಾ
Operation Sindoor | ಭಾರತ- ಪಾಕ್ ಸಂಘರ್ಷ; ಸಂಯಮ ಕಾಯ್ದುಕೊಳ್ಳಲು ಚೀನಾ ಮನವಿ
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಪರಿಸ್ಥಿತಿಯನ್ನು ಚೀನಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ಶಾಂತ ಮತ್ತು ಸಂಯಮದಿಂದ ವರ್ತಿಸಿ ಶಾಂತಿಯುತ ಇತ್ಯರ್ಥದ ಹಾದಿಗೆ ಮರಳಬೇಕು ಎಂದು ಚೀನಾ ಒತ್ತಾಯಿಸಿದೆ.
ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷದ ಪರಿಸ್ಥಿತಿಯನ್ನು ಚೀನಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಾದೇಶಿಕ ಸಮಸ್ಯೆಗಳಿಗೆ ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮನವಿ ಮಾಡಿದೆ.
" ಶಾಂತಿಯುತ ವಿಧಾನಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಕ್ರಮಗಳಿಂದ ದೂರವಿರುವಂತೆ ನಾವು ಎರಡೂ ಕಡೆಯವರನ್ನು ಒತ್ತಾಯಿಸುತ್ತೇವೆ" ಎಂದು ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಎರಡೂ ರಾಷ್ಟ್ರಗಳು ತಮ್ಮ ಮೂಲಭೂತ ಹಿತಾಸಕ್ತಿ, ಸ್ಥಿರತೆ ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ. ಅಂತರರಾಷ್ಟ್ರೀಯ ಸಮುದಾಯ ಕೂಡ ಇದನ್ನೇ ಆಶಿಸುತ್ತಿದೆ. ಉಭಯ ರಾಷ್ಟ್ರಗಳ ಸಂಘರ್ಷ ಶಮನಗೊಳಿಸುವ ಪ್ರಯತ್ನದಲ್ಲಿ ಚೀನಾ ರಚನಾತ್ಮಕ ಪಾತ್ರ ನಿರ್ವಹಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸಲಿದೆ. ದಾಳಿಯ ಬಗ್ಗೆ ನ್ಯಾಯಯುತ ಮತ್ತು ತ್ವರಿತ ತನಿಖೆ ನಡೆಯಬೇಕು. ಅದಕ್ಕೆ ಸಂಯಮದಿಂದ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.