ನೀಟ್‌ನಿಂದ ವಿನಾಯಿತಿ: ತಮಿಳುನಾಡು ವಿಧಾನಸಭೆಯಿಂದ ನಿರ್ಣಯ ಅಂಗೀಕಾರ
ನೀಟ್ ಪರೀಕ್ಷೆ ತಾರತಮ್ಯದಿಂದ ಕೂಡಿದೆ. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶವನ್ನು ನಿರಾಕರಿಸುತ್ತಿದೆ. ರಾಜ್ಯಗಳು ಪಿಯು ಪ್ಲಸ್ ಟು ಅಂಕಗಳನ್ನು ಪ್ರವೇಶ ಮಾನದಂಡವಾಗಿ ಬಳಸುವುದನ್ನು ತಡೆಯುತ್ತಿದೆ ಎಂದು ನಿರ್ಣಯ ಹೇಳಿದೆ.
ಚೆನ್ನೈ, ಜೂನ್ 28- ರಾಜ್ಯಕ್ಕೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಮತ್ತು ಪಿಯು2 ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.
ಬಿಜೆಪಿಯ ವಿರೋಧ ಮತ್ತು ನಿರ್ಗಮನದ ನಡುವೆಯೂ ಸದನವು ನಿರ್ಣಯ ಅಂಗೀಕರಿಸಿದ್ದು, ರಾಷ್ಟ್ರೀಯ ವೈದ್ಯ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಬೇಕು. ಹಲವು ರಾಜ್ಯಗಳಲ್ಲಿ ಅಕ್ರಮಗಳು ಮತ್ತು ಪರೀಕ್ಷೆಗೆ ಹೆಚ್ಚುತ್ತಿರುವ ವಿರೋಧವನ್ನು ಪರಿಗಣಿಸಿ, ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರಕ್ಕೆ ಕರೆ ನೀಡಿತು.
ಬಿಜೆಪಿಯ ಮಿತ್ರ ಪಕ್ಷವಾದ ಪಿಎಂಕೆ ನಿರ್ಣಯವನ್ನು ಬೆಂಬಲಿಸಿತು. ʻಪರೀಕ್ಷೆ ತಾರತಮ್ಯದಿಂದ ಕೂಡಿದೆ. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ವಂಚಿಸಿದೆ ಮತ್ತು ಪಿಯು2 ಅಂಕಗಳನ್ನು ಆಧರಿಸಿ, ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ರಾಜ್ಯಗಳ ಹಕ್ಕುಗಳನ್ನು ನಿರಾಕರಿಸಿದೆ ಎಂದು ಸ್ಟಾಲಿನ್ ಹೇಳಿದರು.
ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು, ನೀಟ್ ಪರೀಕ್ಷೆ ಅನೇಕ ಪ್ರಯೋಜನಗಳನ್ನು ಹೊಂದಿರುವುದರಿಂದ ಅಗತ್ಯವಿದೆ ಎಂದು ವಾದಿಸಿದರು. ಪರೀಕ್ಷೆಯಿಂದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ ಎಂಬ ವಾದಕ್ಕೆ ಪ್ರತಿಯಾಗಿ, ಉತ್ತೀರ್ಣರಾದ ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲು ನೀಡಿದ್ದನ್ನು ಉಲ್ಲೇಖಿಸಿದರು. ನೀಟ್ ಬೇಕು. ನೀಟ್ ವಿರುದ್ಧದ ನಿರ್ಣಯ ಸ್ವೀಕಾರಾರ್ಹವಲ್ಲ ಮತ್ತು ನಾವು ಹೊರನಡೆಯುತ್ತಿದ್ದೇವೆ ಎಂದು ನಾಗೇಂದ್ರನ್ ಬಿಜೆಪಿ ಶಾಸಕರ ಜೊತೆ ಹೊರ ನಡೆದರು.
ಕಲ್ಲಕುರಿಚಿ ಕಳ್ಳಬಟ್ಟಿ ದುರಂತ ಘಟನೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಎಲ್ಲ ಸದಸ್ಯರನ್ನು ಅಮಾನತುಗೊಳಿಸಿದ್ದರಿಂದ, ಆ ಪಕ್ಷದ ಶಾಸಕರು ಸದನದಲ್ಲಿ ಇರಲಿಲ್ಲ.
ನಿರ್ಣಯವನ್ನು ಮಂಡಿಸಿದ ಸ್ಟಾಲಿನ್, 2017ರಲ್ಲಿ ನೀಟ್ ಜಾರಿಗೊಂಡ ಬಳಿಕ ಡಿಎಂಕೆ ಅದನ್ನು ವಿರೋಧಿಸುತ್ತಿದೆ. ಪರೀಕ್ಷೆ ರದ್ದುಗೊಳಿಸಬೇಕೆಂದು ಬೃಹತ್ ಸಹಿ ಅಭಿಯಾನವನ್ನು ಸಹ ಪ್ರಾರಂಭಿಸಿದೆ ಎಂದು ಮುಖ್ಯಮಂತ್ರಿ, ವಿನಾಯತಿಗೆ ರಾಷ್ಟ್ರಪತಿಗಳ ಒಪ್ಪಿಗೆ ಕೋರಿ ಸದನ ಅಂಗೀಕರಿಸಿದ ಎರಡು ನಿರ್ಣಯಗಳನ್ನು ನೆನಪಿಸಿಕೊಂಡರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕೇಂದ್ರಕ್ಕೆ ಬರೆದಿರುವ ಪತ್ರಗಳನ್ನು ಸ್ಟಾಲಿನ್ ಉಲ್ಲೇಖಿಸಿದ್ದು, ‘ತಮಿಳುನಾಡಿನ ಧ್ವನಿ ಈಗ ದೇಶದ ಧ್ವನಿಯಾಗಿ ಮಾರ್ಪಟ್ಟಿದೆ’ ಎಂದು ಹೇಳಿದರು. ನೀಟ್ ವಿರುದ್ಧದ ನಿರ್ಣಯವನ್ನು ಬೆಂಬಲಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.
ʻನೀಟ್ ರದ್ದುಪಡಿಸಬೇಕು. ತಮಿಳುನಾಡಿಗೆ ಪಿಯು2 ಅಂಕಗಳನ್ನು ಮಾನದಂಡವನ್ನಾಗಿಟ್ಟುಕೊಂಡು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಲು ತಮಿಳುನಾಡಿಗೆ ಅವಕಾಶ ಕೊಡಬೇಕು. ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ ಸೂಕ್ತ ತಿದ್ದುಪಡಿ ತಂದು, ನೀಟ್ ರದ್ದುಗೊಳಿಸಬೇಕು ,’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಎಂ.ಅಪ್ಪಾವು ತಿಳಿಸಿದರು.