ಅಬಕಾರಿ ಹಗರಣ:  ಕೇಜ್ರಿವಾಲ್ ಅರ್ಜಿ ವಜಾ
x

ಅಬಕಾರಿ ಹಗರಣ: ಕೇಜ್ರಿವಾಲ್ ಅರ್ಜಿ ವಜಾ

ದೆಹಲಿ ಹೈಕೋರ್ಟ್‌ ಆದೇಶದಿಂದ ಮುಖ್ಯಮಂತ್ರಿಗೆ ಹಿನ್ನಡೆ


ಏಪ್ರಿಲ್‌ 9- ತಮ್ಮ ಬಂಧನವನ್ನು ಪ್ರಶ್ನಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದರಿಂದ ಅವರಿಗೆ ಭಾರೀ ಹಿನ್ನಡೆಯಾಗಿದೆ.

ʻಅವರ ಬಂಧನದಲ್ಲಿ ಕಾನೂನು ನಿಬಂಧನೆಗಳ ಉಲ್ಲಂಘನೆ ಆಗಿಲ್ಲ. ಅಬಕಾರಿ ನೀತಿಯ ರಚನೆಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂಬುದನ್ನು ತೋರಿಸಲು ಇಡಿ ನೀಡಿದ ಸಾಕ್ಷ್ಯ ಸಾಕುʼ ಎಂದು ಹೈಕೋರ್ಟ್ ಹೇಳಿದೆ.

ʻರಿಮ್ಯಾಂಡ್ ನ್ನು ಕಾನೂನುಬಾಹಿರ ಎಂದು ಪರಿಗಣಿಸಲು ಸಾಧ್ಯವಿಲ್ಲʼ ಎಂದು ನ್ಯಾ. ಸ್ವರ್ಣಕಾಂತ ಶರ್ಮಾ ಹೇಳಿದರು. ಇದಲ್ಲದೆ, ʻಜಾರಿ ನಿರ್ದೇಶನಾಲಯ(ಇಡಿ)ವು ಕೇಜ್ರಿವಾಲ್ ಅವರ ಬಂಧನಕ್ಕೆ ʻಸಾಕಷ್ಟು ಸಾಕ್ಷ್ಯಾಧಾರʼ ಹೊಂದಿದೆ. ವಿಚಾರಣೆ ನ್ಯಾಯಾಲಯವು ಸಕಾರಣವಾದ ಆದೇಶದ ಮೂಲಕ ಅವರನ್ನು ಏಜೆನ್ಸಿಯ ವಶಕ್ಕೆ ನೀಡಿದೆʼ ಎಂದು ನ್ಯಾಯಾಧೀಶರು ಹೇಳಿದರು. ʻಬಂಧನದ ಜೊತೆಗೆ, ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಅವರು ಇಡಿ ಕಸ್ಟಡಿಯನ್ನು ಸಹ ಪ್ರಶ್ನಿಸಿದ್ದಾರೆ. ಇದು ಕಾನೂನುಬದ್ಧವಲ್ಲʼ ಎಂದು ನ್ಯಾಯಾಲಯ ಹೇಳಿದೆ.

ನ್ಯಾ. ಶರ್ಮಾ ಅವರು 25 ನಿಮಿಷಗಳ ಕಾಲ ತೀರ್ಪನ್ನು ಓದಿದರು ಮತ್ತು ತೀರ್ಪಿನ ಕೆಲವು ಭಾಗಗಳನ್ನು ಹಿಂದಿಯಲ್ಲಿ ವಿವರಿಸಿದರು.

ಜಾಮೀನು ಅರ್ಜಿ ವಿಚಾರಣೆ ಇಲ್ಲ: ʻಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿಲ್ಲ. ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುತ್ತಿದೆʼ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ʻಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನ್ಯಾಯಾಲಯಗಳು ಸಾಂವಿಧಾನಿಕ ನೈತಿಕತೆಗೆ ಸಂಬಂಧಿಸಿವೆಯೇ ಹೊರತು ರಾಜಕೀಯ ನೈತಿಕತೆಗಲ್ಲʼ ಎಂದು ನ್ಯಾಯಾಲಯ ಹೇಳಿದೆ.

ʻರಾಜಕೀಯ ಪರಿಗಣನೆ ಮತ್ತು ಸಮೀಕರಣಗಳು ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸದ ಕಾರಣ ನ್ಯಾಯಾಲಯದ ಮುಂದೆ ತರಲಾಗುವುದಿಲ್ಲ. ಪ್ರಕರಣದಲ್ಲಿ ನ್ಯಾಯಾಲಯದ ಮುಂದಿರುವುದು ಕೇಜ್ರಿವಾಲ್‌ ಮತ್ತು ಕೇಂದ್ರದ ನಡುವಿನ ಸಂಘರ್ಷವಲ್ಲ ಎಂದು ಸ್ಪಷ್ಟಪಡಿಸುವುದು ಮುಖ್ಯ. ಇದು ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯದ ನಡುವಿನ ಪ್ರಕರಣʼ ಎಂದು ನ್ಯಾ.ಶರ್ಮಾ ಹೇಳಿದರು.

ʻಅವರ ವಿರುದ್ಧದ ಅನುಮೋದಕರ ಹೇಳಿಕೆಗಳನ್ನು ವಿಚಾರಣೆ ಸಮಯದಲ್ಲಿ ನಿರ್ಣಯಿಸಲಾಗುತ್ತದೆ. ಏಕೆಂದರೆ, ಈ ಹಂತದಲ್ಲಿ ಮಿನಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಕೇಜ್ರಿವಾಲ್‌ ವಿಚಾರಣೆ ವೇಳೆ ಅನುಮೋದಕರನ್ನು ಪ್ರಶ್ನಿಸಬಹುದುʼ ಎಂದು ತಿಳಿಸಿದೆ.

Read More
Next Story