
ಎಥಿಲೀನ್ ಆಕ್ಸೈಡ್ ಬಳಕೆ: ಎವರೆಸ್ಟ್, ಎಂಡಿಎಚ್ ವಿರುದ್ಧ ಸರ್ಕಾರ ಕ್ರಮ
ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆ ವಿವಾದದಲ್ಲಿ ರಫ್ತುದಾರರಾದ ಎವರೆಸ್ಟ್ ಮತ್ತು ಎಂಡಿಎಚ್ ಮೇಲೆ ಕ್ರಮ ಕೈಗೊಳ್ಳ ಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ಕಂಪನಿಗಳು ಎಥಿಲೀನ್ ಆಕ್ಸೈಡ್ ಶೇಷಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಇದರಿಂದ ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಯಿಂದ ನಿರ್ದಿಷ್ಟ ಬ್ಯಾಚ್‌ಗಳ ಉತ್ಪನ್ನಗಳ ಮರುಪಡೆಯಬೇಕಾಯಿತು ಮತ್ತು ನಿಷೇಧ ಹೇರಲಾಯಿತು.
ಮಿಂಟ್ ವರದಿ ಪ್ರಕಾರ, ಉತ್ಪನ್ನಗಳ ಕೆಲವು ಬ್ಯಾಚ್‌ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಎಥಿಲೀನ್ ಆಕ್ಸೈಡ್ ಅಧಿಕ ಮಟ್ಟದಲ್ಲಿ ಇದ್ದುದು ಕಂಡುಬಂದ ನಂತರ ಈ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರ ತಪಾಸಣೆಗಳನ್ನು ಚುರುಕುಗೊಳಿಸಿದೆ ಮತ್ತು ಈ ಕಂಪನಿಗಳಿಗೆ ಸರಿಪಡಿಸಲು ಕ್ರಮಗಳನ್ನು ಸೂಚಿಸಿದೆ. ಮಸಾಲೆ ಪದಾರ್ಥಗಳ ರಫ್ತಿನ ನೋಡಲ್ ಏಜೆನ್ಸಿಯಾದ ಭಾರತೀಯ ಸಂಬಾರ ಮಂಡಳಿಯು ಸರಿಪಡಿಸುವ ಕ್ರಮಗಳನ್ನು ಸೂಚಿಸಿದೆ. ಕಂಪನಿಗಳ ಗುಣಮಟ್ಟ ಆಚರಣೆಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಉದ್ಯಮದೊಂದಿಗೆ ಮೂರು ಸಮಾಲೋಚನೆ ಸಭೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಡ್ಡಾಯ ಪರೀಕ್ಷೆ: ತಿಂಗಳ ಆರಂಭದಲ್ಲಿ ಭಾರತೀಯ ಸಂಬಾರ ಮಂಡಳಿಯು ಆರು ತಿಂಗಳ ಅವಧಿಗೆ ಹಾಂಗ್ ಕಾಂಗ್ ಮತ್ತು ಸಿಂಗಾಪುರಕ್ಕೆ ರಫ್ತು ಮಾಡುವ ಎಲ್ಲ ಉತ್ಪನ್ನಗಳ ಎಥಿಲೀನ್ ಆಕ್ಸೈಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಸಂಗ್ರಹ, ಪ್ಯಾಕೇಜಿಂಗ್, ಸಾರಿಗೆಯಲ್ಲಿ ಎಥಿಲೀನ್ ಆಕ್ಸೈಡ್ ಸೇರ್ಪಡೆಯನ್ನು ತಪ್ಪಿಸಲು ರಫ್ತುದಾರರಿಗೆ ಮಾರ್ಗಸೂಚಿಗಳನ್ನು ನೀಡಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಮಾದರಿಗಳನ್ನು ಪರೀಕ್ಷಿಸುತ್ತಿದೆ.
ಎಥಿಲೀನ್ ಆಕ್ಸೈಡ್ ಬಳಕೆ: ಬ್ಯಾಕ್ಟೀರಿಯಾ ಪ್ರಮಾಣ, ಬೂಷ್ಟು ಕಡಿಮೆ ಮಾಡಲು ಕ್ರಿಮಿನಾಶಕವಾಗಿ ಬಳಸಲ್ಪಡುವ ಎಥಿಲೀನ್ ಆಕ್ಸೈಡ್, ನಿಗದಿತ ಮಟ್ಟ ಮೀರಿದರೆ ಕ್ಯಾನ್ಸರಿಗೆ ಕಾರಣವಾಗಬಹುದು. ಆದರೆ, ದೇಶಗಳು ನಿಗದಿಪಡಿಸಿದ ಮಟ್ಟ ವಿಭಿನ್ನವಾಗಿದೆ. ಉದಾಹರಣೆಗೆ, ಐರೋಪ್ಯ ಒಕ್ಕೂಟದಲ್ಲಿ ಎಥಿಲೀನ್ ಆಕ್ಸೈಡ್‌ನ ಗರಿಷ್ಠ ಶೇಷ ಮಿತಿ ಪ್ರತಿ ಕೆಜಿಗೆ 0.02-0.1 ಮಿಗ್ರಾಂ., ಅಮೆರಿಕ ಮತ್ತು ಕೆನಡಾದಲ್ಲಿ 7 ಮಿಗ್ರಾಂ ಮತ್ತು ಸಿಂಗಾಪುರ 50 ಮಿಗ್ರಾಂ ಮಿತಿ ವಿಧಿಸುತ್ತದೆ. ಆದರೆ, ಹಾಂಗ್ ಕಾಂಗ್ ಆಹಾರ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
ಭಾರತದಿಂದ ಮಸಾಲೆ ರಫ್ತು: ಭಾರತದಿಂದ ಸಂಬಾರ ಪದಾಥಗಳ ರಫ್ತು ಹೆಚ್ಚುತ್ತಿದೆ. 2024 ರಲ್ಲಿ4.25 ಶತ ಕೋಟಿ ಡಾ. ಮೌಲ್ಯದ ಉತ್ಪನ್ನಗಳು ರಫ್ತಾಗಿವೆ. ದೇಶ ಕರಿಮೆಣಸು, ಏಲಕ್ಕಿ, ಮೆಣಸಿನಕಾಯಿ, ಅರಿಶಿನ ಮತ್ತು ಜೀರಿಗೆಯಂತಹ ಮಸಾಲೆಗಳ ವಿಶ್ವದ ಅತಿ ದೊಡ್ಡ ಉತ್ಪಾದಕ ಮತ್ತು ರಫ್ತುದಾರರಲ್ಲಿ ಒಂದಾಗಿದೆ.