ಸಂವಿಧಾನ ತಜ್ಞ, ಸುಪ್ರೀಂ ಮಾಜಿ ವಕೀಲ ಎ.ಜಿ. ನೂರಾನಿ ಇನ್ನಿಲ್ಲ
x

ಸಂವಿಧಾನ ತಜ್ಞ, ಸುಪ್ರೀಂ ಮಾಜಿ ವಕೀಲ ಎ.ಜಿ. ನೂರಾನಿ ಇನ್ನಿಲ್ಲ


ಸುಪ್ರೀಂ ಕೋರ್ಟ್‌ನ ಮಾಜಿ ವಕೀಲ, ಖ್ಯಾತ ಸಂವಿಧಾನ ತಜ್ಞ, ವಿದ್ವಾಂಸ ಮತ್ತು ರಾಜಕೀಯ ವಿಮರ್ಶಕ ಅಬ್ದುಲ್ ಗಫೂರ್ ನೂರಾನಿ ಗುರುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕಾನೂನು, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿರುವ ಅವರು ಸಂವಿಧಾನ ಮತ್ತು ಮಾನವ ಹಕ್ಕು ವಿಷಯಗಳ ಬಗ್ಗೆ ಒಳನೋಟವುಳ್ಳ ವಿಶ್ಲೇಷಣೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದರು.

'ದಿ ಕಾಶ್ಮೀರ್ ಕೊಶ್ಚನ್‌' (1964), 'ಮಿನಿಸ್ಟರ್ಸ್‌ ಮಿಸ್‌ಕಂಡಕ್ಟ್‌ ' (1973), 'ಕಾನ್ಸ್ಟಿಟ್ಯೂಷನಲ್‌ ಕೊಶ್ಚನ್ಸ್‌ ಆಂಡ್‌ ಸಿಟಿಜನ್ಸ್‌ ರೈಟ್ಸ್ ' (2006) ಮತ್ತು 'ದಿ ಆರ್‌ಎಸ್‌ಎಸ್: ಎ ಮೆನೇಸ್ ಟು ಇಂಡಿಯಾ' (2019) ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ‌.

1930 ರಲ್ಲಿ ಬಾಂಬೆಯಲ್ಲಿ (ಮುಂಬೈ) ಜನಿಸಿದ ಎ.ಜಿ. ನೂರಾನಿ 1953 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಕಾನೂನು ವೃತ್ತಿ ಮಾಡುತ್ತಿದ್ದರೂ, ತಮ್ಮ ಹೆಚ್ಚಿನ ಸಮಯವನ್ನು ಕಾನೂನು, ರಾಜಕೀಯ ಮತ್ತು ಐತಿಹಾಸಿಕ ವಿಷಯಗಳ ಬಗ್ಗೆ ಬರೆಯಲು ಮೀಸಲಿಟ್ಟಿದ್ದರು. ತೀಕ್ಷ್ಣ ಬುದ್ಧಿಶಕ್ತಿ ಮತ್ತು ಸಾಂವಿಧಾನಿಕ ವಿಷಯಗಳ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಕಾನೂನು ಮತ್ತು ಸಾಂವಿಧಾನಿಕ ವಿಷಯಗಳ ಪರಿಣತರಾಗಿದ್ದರು.

ಅವರ ಅಂಕಣ ʻಕಾನ್ಸ್ಟಿಟ್ಯೂಷನಲ್‌ ಕೊಶ್ಚನ್ಸ್‌ʼ ಮೂರು ದಶಕಗಳ ಕಾಲ ಪ್ರಕಟಗೊಂಡಿತು ಮತ್ತು ಸಂಕೀರ್ಣ ಕಾನೂನು ಸಮಸ್ಯೆಗಳ ನಿಖರ ಸಂಶೋಧನೆ ಮತ್ತು ಸಮತೋಲಿತ ವಿಶ್ಲೇಷಣೆಗೆ ಹೆಸರುವಾಸಿಯಾಗಿತ್ತು.

ಸಂತಾಪ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಕ್ಸ್‌ ನಲ್ಲಿ ಸಂತಾಪ ಹಂಚಿಕೊಂಡರು. ʻಇಂದು ಮುಂಜಾನೆ ಎ.ಜಿ. ನೂರಾನಿ ಅವರ ನಿಧನದ ಬಗ್ಗೆ ಕೇಳಿದೆ. ನೂರಾನಿ ಅಕ್ಷರಗಳ ಮನುಷ್ಯ, ನಿಪುಣ ವಕೀಲ, ವಿದ್ವಾಂಸ ಮತ್ತು ರಾಜಕೀಯ ವಿಮರ್ಶಕ. ಅವರು ಕಾನೂನು, ಕಾಶ್ಮೀರ, ಆರ್‌ಎಸ್‌ಎಸ್‌ ಮತ್ತು ಸಂವಿಧಾನದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ,ʼ ಎಂದಿದ್ದಾರೆ.

ಸಂಸದ ಅಸಾದುದ್ದೀನ್ ಓವೈಸಿ ಅವರು ಎಕ್ಸ್‌ ಸಂದೇಶದಲ್ಲಿ, ʻಉನ್ನತ ವಿದ್ವಾಂಸ ಎ.ಜಿ. ನೂರಾನಿ ನಿಧನರಾಗಿದ್ದಾರೆ. ನಾನು ಅವರಿಂದ ಸಂವಿಧಾನ, ಕಾಶ್ಮೀರ, ಚೀನಾ ಮತ್ತು ಉತ್ತಮ ಆಹಾರವನ್ನು ಮೆಚ್ಚುವ ಕಲೆಯನ್ನು ಕಲಿತುಕೊಂಡಿದ್ದೇನೆ,ʼ ಎಂದಿದ್ದಾರೆ.

Read More
Next Story