Electoral Bonds| ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಸುಪ್ರೀಂ ನಕಾರ
x

Electoral Bonds| ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಸುಪ್ರೀಂ ನಕಾರ

ಚುನಾವಣೆ ಬಾಂಡ್‌ ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮು.ನ್ಯಾ. ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಬಿ. ಪರ್ದಿವಾಲಾ ಅವರ ಪೀಠವು ಪರಿಚ್ಛೇದ 32 ರ ಅಡಿಯಲ್ಲಿ ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಮತ್ತು ಅಕಾಲಿಕ ಎಂದು ಹೇಳಿದೆ.


ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಸಲ್ಲಿಸಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 2) ತಿರಸ್ಕರಿಸಿದೆ.

ಈ ಹಂತದಲ್ಲಿ ಸಂವಿಧಾನದ 32ನೇ ಪರಿಚ್ಛೇದದಡಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಮತ್ತು ಅಕಾಲಿಕ ಎಂದು ಮು.ನ್ಯಾ.ಡಿ.ವೈ. ಚಂದ್ರ ಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರ ಪೀಠ ಹೇಳಿದೆ. ಚುನಾವಣೆ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು ಎಂದು ಭಾವಿಸಿ, ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ʻನ್ಯಾಯಾಂಗ ಪರಿಶೀಲನೆಯ ಅಂಶವಿರುವುದರಿಂದ, ಚುನಾವಣೆ ಬಾಂಡ್‌ಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ, ಕಾನೂನಿನಡಿ ಪರಿಹಾರಗಳು ಲಭ್ಯವಿರುವಾಗ, ಕ್ರಿಮಿನಲ್ ತಪ್ಪುಗಳನ್ನು ಒಳಗೊಂಡಿರುವ ಪ್ರಕರಣಗಳು ಪರಿಚ್ಛೇದ 32 ರ ಅಡಿಯಲ್ಲಿ ಇರಬಾರದು,ʼ ಎಂದು ಪೀಠ ಹೇಳಿದೆ.

ಎನ್‌ಜಿಒ ಸಲ್ಲಿಸಿದ ಅರ್ಜಿ: ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಸೇರಿದಂತೆ ಎನ್‌ಜಿಒ ಗಳು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ರಾಜಕೀಯ ಪಕ್ಷಗಳು, ನಿಗಮಗಳು ಮತ್ತು ತನಿಖಾ ಏಜೆನ್ಸಿಗಳ ನಡುವೆ ʻಸ್ಪಷ್ಟವಾದ ವ್ಯವಹಾರʼ ಇದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಆದರೆ, ರಾಜಕೀಯ ಪಕ್ಷ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ವಹಿವಾಟು ಕುರಿತು ವೈಯಕ್ತಿಕ ದೂರುಗಳು ಕಾನೂನಿನಡಿ ಲಭ್ಯ ವಿರುವ ಪರಿಹಾರಗಳನ್ನು ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ವಿಷಯಗಳ ತನಿಖೆಗೆ ಅಧಿಕಾರಿಗಳು ನಿರಾಕರಿಸಿದಾಗ, ಇರುವ ಆಯ್ಕೆಗಳನ್ನು ಇದು ಒಳಗೊಂಡಿರಬೇಕು ಎಂದು ಪೀಠ ಹೇಳಿದೆ.

ʻಪ್ರಸ್ತುತ, ಕಾನೂನಿನಲ್ಲಿ ಪರಿಹಾರಗಳು ಲಭ್ಯವಿರುವುದರಿಂದ, ನ್ಯಾಯಾಲಯದ ಮಧ್ಯಪ್ರವೇಶವು ಅಕಾಲಿಕ ಮತ್ತು ಅನುಚಿತವಾಗಲಿದೆ. ಈ ಹಂತದಲ್ಲಿ ನ್ಯಾಯಾಲಯ ಹಾಗೆ ಹೇಳಲು ಸಾಧ್ಯವಿಲ್ಲ,ʼ ಎಂದು ಹೇಳಿದೆ.

ವಿಚಾರಣೆ ಅರ್ಹ: ಪ್ರಶಾಂತ್ ಭೂಷಣ್- ಫೆಬ್ರವರಿ 2024 ರಲ್ಲಿ ಲೋಕಸಭೆ ಚುನಾವಣೆ ಪ್ರಾರಂಭಕ್ಕೆ ಕೆಲವೇ ವಾರಗಳ ಮೊದಲು ಚುನಾ ವಣೆ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ರಾಜಕೀಯ ಪಕ್ಷಗಳಿಗೆ ನೀಡುವ ಬಹಿರಂಗಪಡಿಸದ ಹಣವು ಮತದಾರರ ಪಾರದರ್ಶಕತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತು. ದೇಣಿಗೆ ನೀಡಿದವರು ಮತ್ತು ಪಡೆದವರ ದತ್ತಾಂಶವನ್ನು ಬಿಡುಗಡೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶನ ನೀಡಿತು.

ನ್ಯಾಯಾಲಯ ಶುಕ್ರವಾರ 4 ಅರ್ಜಿಗಳ ವಿಚಾರಣೆ ನಡೆಸಿತು. ಇದರಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಕೋರಿದ ಅರ್ಜಿಯೂ ಇದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ʻಸರ್ಕಾರಗಳು ಭಾಗಿಯಾಗಿರುವ ಕಾರಣ ಪ್ರಕರಣ ವಿಶೇಷ ತನಿಖೆಗೆ ಅರ್ಹವಾಗಿದೆ. ಆಡಳಿತ ಪಕ್ಷ ಮತ್ತು ಉನ್ನತ ಕಾರ್ಪೊರೇಟ್ ಸಂಸ್ಥೆಗಳು ಶಾಮೀಲಾಗಿವೆ,ʼ ಎಂದು ಹೇಳಿದರು.

ʻ8,000 ಕೋಟಿ ರೂ.ಗೂ ಹೆಚ್ಚು ಹಣ ಹರಿದಿದೆ. ತಮಿಳುನಾಡಿನಲ್ಲಿ ಸಮಸ್ಯೆಗೆ ಸಿಲುಕಿರುವ ಐಎಫ್‌ಬಿ ಆಗ್ರೋದಂಥ ಕಂಪನಿ 40 ಕೋಟಿ ರೂ. ಬಾಂಡ್‌ಗಳನ್ನು ಪಾವತಿಸಿದೆ .ಇದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಯಾವುದೇ ಪಕ್ಷವು ರುಷುವತ್ತು ಮತ್ತು ಲಂಚದ ಮೂಲಕ ಪಡೆದ ಹಣವನ್ನು ಉಳಿಸಿಕೊಳ್ಳಲು ಬಿಡಬಾರದು,ʼ ಎಂದರು.

Read More
Next Story