ಚುನಾವಣೆ ಬಾಂಡ್: ಫ್ಯೂಚರ್ ಗುಂಪಿನಿಂದ ತೃಣಮೂಲ ಕಾಂಗ್ರೆಸ್ ಗೆ 540 ಕೋಟಿ ರೂ.,ಬಿಜೆಪಿಗೆ ವಿವಿಧ ಕಂಪನಿಗಳಿಂದ 6,000 ಕೋಟಿ ರೂ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಫ್ಯೂಚರ್ ಗೇಮಿಂಗ್‌ನಿಂದ ಚುನಾವಣೆ ಬಾಂಡ್‌ಗಳ ಮೂಲಕ 540 ಕೋಟಿ ರೂ. ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಎಸ್‌ಬಿಐ ಅಂಕಿಅಂಶ ಹೇಳಿದೆ. ಫ್ಯೂಚರ್ ಗೇಮಿಂಗ್ ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ, ಬಿಜೆಪಿ, ಕಾಂಗ್ರೆಸ್, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕೂಡ ಫ್ಯೂಚರ್ ಗೇಮಿಂಗ್‌ನಿಂದ ಹಣ ಪಡೆದಿವೆ. ಕಂಪನಿ ಒಟ್ಟು 1,368 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.
ಕಂಪನಿಯಿಂದ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಗೆ 509 ಕೋಟಿ ರೂ., ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿಗೆ 160 ಕೋಟಿ ರೂ., ಬಿಜೆಪಿಗೆ 100 ಕೋಟಿ ರೂ., ಕಾಂಗ್ರೆಸ್‌ಗೆ 50 ಕೋಟಿ ರೂ. ಹಾಗೂ ಲಾಟರಿ ಕಾನೂನುಬದ್ಧವಾಗಿರುವ ಸಿಕ್ಕಿಂನ ಎರಡು ಪಕ್ಷಗಳು 10 ಕೋಟಿಗಿಂತ ಕಡಿಮೆ ಮೊತ್ತ ಪಡೆದುಕೊಂಡಿವೆ.
ಮೇಘಾ ಎಂಜಿನಿಯರಿಂಗ್: ಎರಡನೇ ಅತಿ ದೊಡ್ಡ ದಾನಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್, ಬಿಜೆಪಿ, ಭಾರತ್ ರಾಷ್ಟ್ರ ಸಮಿತಿ, ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳಿಗೆ 966 ಕೋಟಿ ರೂ. ನೀಡಿದೆ. ಮೂರನೇ ಅತಿ ದೊಡ್ಡ ದಾನಿ ಕ್ವಿಕ್ ಸಪ್ಲೈ 2021-22 ಮತ್ತು 2023-24ರ ನಡುವೆ 410 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ: ಬಿಜೆಪಿಗೆ 395 ಕೋಟಿ ಮತ್ತು ಶಿವಸೇನೆಗೆ 25 ಕೋಟಿ ರೂ.ನೀಡಿದೆ. ಕ್ವಿಕ್ ಸಪ್ಲೈ ನವಿ ಮುಂಬೈನ ಧೀರೂಭಾಯಿ ಅಂಬಾನಿ ನಾಲೆಡ್ಜ್ ಸಿಟಿ (ಡಿಎಕೆಸಿ) ಯಲ್ಲಿ ನೋಂದಾಯಿತ ವಿಳಾಸ ಹೊಂದಿರುವ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಂಪರ್ಕ ಹೊಂದಿರುವ ಕಂಪನಿ.
ಬಿಜೆಪಿಗೆ ಹಣ: ಬಿಜೆಪಿ 6,000 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆದಿದ್ದು, ವೇದಾಂತ, ಭಾರ್ತಿ ಏರ್‌ಟೆಲ್, ಮುತ್ತೂಟ್, ಬಜಾಜ್ ಆಟೋ, ಜಿಂದಾಲ್ ಗ್ರೂಪ್ ಮತ್ತು ಟಿವಿಎಸ್ ಮೋಟಾರ್ ಮತ್ತಿತರ ಕಾರ್ಪೊರೇಟ್ ಗುಂಪುಗಳಿಂದ ಹಣ ಪಡೆದಿದೆ. ಕೆವೆಂಟರ್ಸ್ ಫುಡ್ ಪಾರ್ಕ್, ಎಂಕೆಜೆ ಎಂಟರ್‌ಪ್ರೈಸಸ್ ಮತ್ತು ಮದನ್‌ಲಾಲ್ ಲಿಮಿಟೆಡ್‌ನಿಂದ 346 ಕೋಟಿ ರೂ. ಪಡೆದುಕೊಂಡಿದೆ: ಇವೆಲ್ಲವೂ ಒಂದೇ ಕೋಲ್ಕತ್ತಾ ವಿಳಾಸವನ್ನು ಹೊಂದಿವೆ. ವೇದಾಂತ 226 ಕೋಟಿ, ಹಲ್ದಿಯಾ ಎನರ್ಜಿ 81 ಕೋಟಿ, ವೆಸ್ಟರ್ನ್ ಯುಪಿ ಪವರ್ ಮತ್ತು ಟ್ರಾನ್ಸ್‌ಮಿಷನ್ ಕಂಪನಿಯಿಂದ 80 ಕೋಟಿ ಹಾಗೂ ವೆಲ್ಸ್ಪನ್‌ನಿಂದ 42 ಕೋಟಿ ರೂ. ಪಡೆದಿದೆ.
ವೇದಾಂತ ಗುಂಪು ಕಾಂಗ್ರೆಸ್ಸಿಗೆ 125 ಕೋಟಿ ಹಾಗೂ ಬಿಜೆಡಿ, ಟಿಎಂಸಿಗೆ ದೇಣಿಗೆ ನೀಡಿವೆ. ಭಾರ್ತಿ ಏರ್‌ಟೆಲ್ ಬಿಜೆಪಿ, ಆರ್‌ಜೆಡಿ, ಎಸ್‌ಎಡಿ, ಕಾಂಗ್ರೆಸ್ ಮತ್ತು ಬಿಹಾರ ಪ್ರದೇಶ ಜನತಾ ದಳ (ಯುನೈಟೆಡ್) ಗೆ ದೇಣಿಗೆ ನೀಡಿದೆ. ಮುತ್ತೂಟ್ ಬಿಜೆಪಿ ಮತ್ತು ಎನ್‌ಸಿಪಿ, ಬಜಾಜ್ ಗ್ರೂಪ್ ಬಿಜೆಪಿ ಮತ್ತು ಎಎಪಿ, ಅಪೊಲೊ ಟೈರ್ಸ್ ಕಾಂಗ್ರೆಸ್‌ಗೆ ಮತ್ತು ಕೆವೆಂಟರ್ಸ್ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಿದೆ. ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಬಿಜೆಪಿಗೆ 35 ಕೋಟಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಬಿಜೆಪಿ, ಟಿಎಂಸಿ ಮತ್ತು ಕಾಂಗ್ರೆಸ್ಸಿಗೆ, ರುಂಗ್ಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಕಾಂಗ್ರೆಸ್, ಬಿಜೆಪಿ, ಟಿಎಂಸಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಗೆ ದೇಣಿಗೆ ನೀಡಿವೆ.
ಔಷಧ ತಯಾರಿಕೆ ಕಂಪನಿಗಳಿಂದ ದೇಣಿಗೆ: ಔಷಧ ತಯಾರಿಕೆ ಕಂಪನಿಗಳಾದ ಪಿರಮಲ್ ಕ್ಯಾಪಿಟಲ್ ಮತ್ತು ಸನ್ ಫಾರ್ಮಾ ಬಿಜೆಪಿಗೆ, ಟಾರೆಂಟ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಮತ್ತು ನ್ಯಾಟ್ಕೊ ಫಾರ್ಮಾ ಬಿಜೆಪಿ, ಟಿಡಿಪಿ, ಟಿಎಂಸಿ ಮತ್ತು ಬಿಆರ್‌ಎಸ್ ದೇಣಿಗೆ ನೀಡಿವೆ. ಆಮ್ ಆದ್ಮಿ ಪಕ್ಷವು ಸ್ಪೈಸ್‌ಜೆಟ್ ಮತ್ತು ಟೆಕ್ ಮಹೀಂದ್ರಾದಿಂದ ದೇಣಿಗೆ ಸ್ವೀಕರಿಸಿದೆ. ಮೇಘಾ ಇಂಜಿನಿಯರಿಂಗ್, ಟಾರೆಂಟ್ ಫಾರ್ಮಾಸ್ಯುಟಿಕಲ್ಸ್, ಬಿ.ಜಿ. ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬಜಾಜ್ ಆಟೋ ಲಿಮಿಟೆಡ್, ಟೆಕ್ ಮಹೀಂದ್ರಾ ಲಿಮಿಟೆಡ್, ಸ್ಪೈಸ್ ಜೆಟ್ ಲಿಮಿಟೆಡ್, ಡಿರೈವ್ ಟ್ರೇಡಿಂಗ್ ಮತ್ತು ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ವರ್ಧಮಾನ್ ಟೆಕ್ಸ್ಟೈಲ್ ಕಾರ್ಪೊರೇಷನ್, ವರ್ಧಮಾನ್ ಟೆಕ್ಸ್ಟೈಲ್ ಕಾರ್ಪೊರೇಷನ್ ಬಿಜೆಪಿಗೆ ದೇಣಿಗೆ ನೀಡಿವೆ.
ಚುನಾವಣೆ ಆಯೋಗ ಗುರುವಾರ ಆಲ್ಫಾನ್ಯೂಮರಿಕ್ ದತ್ತಾಂಶ ಬಿಡುಗಡೆ ಮಾಡಿದೆ. ಚುನಾವಣೆ ಬಾಂಡ್ ಯೋಜನೆಯನ್ನು ಬಿಜೆಪಿ ಸರ್ಕಾರ ಮಾರ್ಚ್ 2018 ರಲ್ಲಿ ಪ್ರಾರಂಭಿಸಿತು ಮತ್ತು ಸುಪ್ರೀಂ ಕೋರ್ಟ್ ಆದೇಶದ ನಂತರ ಫೆಬ್ರವರಿ 2024ರಲ್ಲಿ ರದ್ದಾಯಿತು.