ELECTORAL BONDS | ಬಾಂಡ್‌ ಹೊಸದೇನೂ ಅಲ್ಲ: ಆರ್‌ ಎಸ್‌ ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ
x
ದತ್ತಾತ್ರೇಯ ಹೊಸಬಾಳೆ

ELECTORAL BONDS | ಬಾಂಡ್‌ ಹೊಸದೇನೂ ಅಲ್ಲ: ಆರ್‌ ಎಸ್‌ ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ

ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ಮರು ಆಯ್ಕೆಯಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಚುನಾವಣಾ ಬಾಂಡ್‌ ಅಕ್ರಮದ ಕುರಿತು ಪ್ರತಿಕ್ರಿಯಿಸಿದ್ದಾರೆ


ಚುನಾವಣಾ ಬಾಂಡ್‌ಗಳು ಹೊಸದೇನು ಅಲ್ಲ, ಈ ಮೊದಲೂ ಆ ಬಗ್ಗೆ ಚರ್ಚೆಗಳಾಗಿವೆ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಮಹಾರಾಷ್ಟ್ರದ ರೇಶಿಂಬಾಗ್ ನಲ್ಲಿ ಈಚೆಗೆ ನಡೆದ ಮೂರು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ ಎಸ್‌ ಎಸ್‌)ದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

ಸಂಘಟನೆಯ ಮಹತ್ವದ ಸಭೆಯಲ್ಲಿ ಆರ್‌ ಎಸ್‌ ಎಸ್‌ನ ಸರಕಾರ್ಯವಾಹರಾಗಿ ಪುನರಾಯ್ಕೆ ಆದ ಬಳಿಕ ಹೊಸಬಾಳೆ ಅವರು, ಚುನಾವಣಾ ಬಾಂಡ್‌ ಕುರಿತ ಈ ಹೇಳಿಕೆ ಹೊರಬಿದ್ದಿದೆ.

ಚುನಾವಣಾ ಬಾಂಡ್ ಎನ್ನುವುದು ಏಕಾಏಕಿ ಬಂದಿಲ್ಲ, ಹೊಸದೂ ಅಲ್ಲ. ಬಾಂಡ್‌ನ ಬಗ್ಗೆ ರಾಷ್ಟ್ರದಲ್ಲಿ ಈ ಮೊದಲೂ ಚರ್ಚೆಗಳಾಗಿವೆ. ಪ್ರಸ್ತುತ ಚುನಾವಣಾ ಬಾಂಡ್ ಎನ್ನುವುದು ಹೊಸ ಪ್ರಯೋಗದ ರೂಪದಲ್ಲಿ ಬಂದಿದೆ. ನಮ್ಮ ದೇಶದಲ್ಲಿ ಇವಿಎಂ ಬಂದಾಗಲೂ ದೇಶದಲ್ಲಿ ಅದರ ಬಗ್ಗೆ ಚರ್ಚೆ ಆಗಿತ್ತು. ಹೊಸ ಪ್ರಯೋಗಗಳು ಬಂದಾಗ ಪ್ರಶ್ನೆಗಳು ಏಳುವುದು ಸಹಜ ಎಂದು ಅವರು ಚುನಾವಣಾ ಬಾಂಡ್‌ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂದು ಆರ್‌ ಎಸ್‌ ಎಸ್‌ ನ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಸೂಚನೆಯಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಆಯೋಗ ಮಾಹಿತಿಯನ್ನು ಬಹಿರಂಗಪಡಿಸಿದೆ. ಆಯೋಗ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯು ಚುನಾವಣಾ ಬಾಂಡ್‌ನ ಮೂಲಕ ಅತೀ ಹೆಚ್ಚು ದೇಣಿಗೆ ಸಂಗ್ರಹಿಸಿದ್ದು, ದೇಣಿಗೆಗೆ ಪ್ರತಿಯಾಗಿ ಹಲವು ಕಾರ್ಪೊರೇಟ್‌ ಕಂಪನಿಗಳಿಗೆ ಬಹುಕೋಟಿ ಯೋಜನೆಗಳ ಗುತ್ತಿಗೆಯಂತಹ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂಬ ದೂರುಗಳು ದೇಶದ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ.

ಪ್ರತಿಪಕ್ಷಗಳು ಸಹ ಚುನಾವಣಾ ಬಾಂಡ್‌ ವಿಷಯವನ್ನೇ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ ಎಸ್‌ ಎಸ್‌ ಸಹ ಮುಖ್ಯಸ್ಥರಾದ ಹೊಸಬಾಳೆ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಖಿಲ ಭಾರತೀಯ ಪ್ರತಿನಿಧಿ ಸಭೆ

ಮಹಾರಾಷ್ಟ್ರದ ರೇಶಿಂಬಾಗ್ ನ ಸ್ಮೃತಿಭವನದಲ್ಲಿ ಈಚೆಗೆ ಮೂರು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಪುನರುತ್ಥಾನಕ್ಕಾಗಿ ರಾಮಮಂದಿರ ಎನ್ನುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹರ ಚುನಾವಣೆ ನಡೆದಿದ್ದು, ದತ್ತಾತ್ರೇಯ ಹೊಸಬಾಳೆಯವರು ಸರಕಾರ್ಯವಾಹರಾಗಿ ಮರುಆಯ್ಕೆಯಾಗಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ಅವರು, ಸಮಾಜದಲ್ಲಿ ಸಂಘದ ಪ್ರಭಾವ ವೃದ್ಧಿಸುತ್ತಿದೆ. ಇದರ ಫಲವಾಗಿ ಸಂಘದ ಆಯಮಗಳು, ಶಾಖೆಗಳು ಮತ್ತು ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿದೆ. ದೇಶದ ಪ್ರತಿ ಭಾಗದಲ್ಲೂ ಸಂಘ ಕಾರ್ಯ ವ್ಯಾಪಿಸಿದೆ. ಸಮಾಜದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ದೃಷ್ಟಿಯಿಂದ ಸಂಘ ಕೇವಲ ಸಂಘಟನೆಯಾಗಿರದೆ ಅಕ್ಷರಶಃ ಒಂದು ರಾಷ್ಟ್ರೀಯ ಅಭಿಯಾನವಾಗಿದೆ ಎಂದು ಹೇಳೀದರು.

ಲೋಕಸಭೆ ಚುನಾವಣೆಯು ಸಮೀಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ದೇಶವನ್ನು ಉತ್ತಮಗೊಳಿಸುವ, ಪ್ರಜಾಪ್ರಭುತ್ವವನ್ನು, ಏಕತೆಯನ್ನು ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಂಘದ ಸ್ವಯಂಸೇವಕರು ಶೇ.100ರಷ್ಟು ಮತದಾನ ಆಗುವಂತೆ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಯಾವುದೇ ವೈಮನಸ್ಸು, ಗೊಂದಲ, ದೇಶದ ಏಕತೆಯ ವಿರುದ್ಧದ ಮಾತುಗಳು ಬರಬಾರದು. ಇದರ ಬಗ್ಗೆ ಎಚ್ಚರವಾಗಿರಬೇಕು ಎಂದರು.

Read More
Next Story