
ಚುನಾವಣಾ ಆಯೋಗದಿಂದ ಇಂದು ಸುದ್ದಿಗೋಷ್ಠಿ; ಹಲವು ಸ್ಪಷ್ಟನೆ ನಿರೀಕ್ಷೆ
ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಈ ರೀತಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುವುದು ಆಯೋಗದ ಕಾರ್ಯವೈಖರಿಯಲ್ಲಿ ಅಪರೂಪದ ಕ್ರಮವಾಗಿದೆ.
'ಮತ ಕಳ್ಳತನ' ಆರೋಪಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಪಕ್ಷಗಳು ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ, ಭಾರತ ಚುನಾವಣಾ ಆಯೋಗವು ಇಂದು (ಭಾನುವಾರ) ಮಧ್ಯಾಹ್ನ 3ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ಮಾಡಿರುವ ಗಂಭೀರ ಆರೋಪಗಳಿಗೆ ಆಯೋಗವು ಇಂದು ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಈ ರೀತಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುವುದು ಆಯೋಗದ ಕಾರ್ಯವೈಖರಿಯಲ್ಲಿ ಅಪರೂಪದ ಕ್ರಮವಾಗಿದೆ. ಆಯೋಗವು ಸುದ್ದಿಗೋಷ್ಠಿಯ ನಿಖರ ವಿಷಯವನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೂ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SSR) ಸಂಬಂಧಿಸಿದಂತೆ 'ಇಂಡಿಯಾ' ಮೈತ್ರಿಕೂಟ ಮಾಡಿರುವ ಸರಣಿ ಆರೋಪಗಳಿಗೆ ಪ್ರತ್ಯುತ್ತರ ನೀಡುವುದು ಇದರ ಪ್ರಮುಖ ಉದ್ದೇಶವಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣಗಳಲ್ಲಿ ಭಾರಿ 'ಮತ ಕಳ್ಳತನ' ನಡೆಸಿ ಬಿಜೆಪಿ ಜಯ ಗಳಿಸಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ," ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿರುವುದು ಇಲ್ಲಿ ಸ್ಮರಣಾರ್ಹ.
ವಾಕ್ಸಮರ
ರಾಹುಲ್ ಗಾಂಧಿಯವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಆಯೋಗ, ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎನ್ನಲಾದ ಮತದಾರರ ವಿವರವನ್ನು ಲಿಖಿತ ಘೋಷಣೆಯೊಂದಿಗೆ ಸಲ್ಲಿಸುವಂತೆ ಸೂಚಿಸಿತ್ತು. ತಮ್ಮ ಆರೋಪಗಳನ್ನು ಹಿಂಪಡೆಯದಿದ್ದರೆ ಸದನದಲ್ಲಿ ಕ್ಷಮೆ ಯಾಚಿಸಬೇಕಾದೀತು ಎಂದೂ ಎಚ್ಚರಿಸಿತ್ತು. ಆದರೆ ಇದಕ್ಕೆ ಜಗ್ಗದ ರಾಹುಲ್, "ಚುನಾವಣಾ ಆಯೋಗದ ಮುಂದಿಟ್ಟಿರುವ ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಪಾರದರ್ಶಕತೆಯನ್ನು ತೋರಿಸಿ ಮತ್ತು ಡಿಜಿಟಲ್ ಸ್ವರೂಪದಲ್ಲಿ ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ," ಎಂದು ವಾಗ್ದಾಳಿಯನ್ನು ಮುಂದುವರಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ಕೈಬಿಡಲಾಗಿದೆ ಎನ್ನಲಾದ 65 ಲಕ್ಷ ಮತದಾರರ ಹೆಸರು ಮತ್ತು ವಿವರಗಳನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್, ಗುರುವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸುದ್ದಿಗೋಷ್ಠಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.