ನಿರುದ್ಯೋಗಿ ಭಾರತೀಯರಲ್ಲಿ ವಿದ್ಯಾವಂತರ ಪ್ರಮಾಣ ಶೇ. 65.7: ವರದಿ
x

ನಿರುದ್ಯೋಗಿ ಭಾರತೀಯರಲ್ಲಿ ವಿದ್ಯಾವಂತರ ಪ್ರಮಾಣ ಶೇ. 65.7: ವರದಿ

ಮಾನವ ಅಭಿವೃದ್ಧಿ ಸಂಸ್ಥೆ (ಐಎಚ್‌ ಡಿ) ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ವರದಿ


ಮಾ.26- ಮಾನವ ಅಭಿವೃದ್ಧಿ ಸಂಸ್ಥೆ (ಐಎಚ್‌ ಡಿ) ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಮಂಗಳವಾರ ನವದೆಹಲಿಯಲ್ಲಿ ʻಭಾರತ ಉದ್ಯೋಗ ವರದಿ 2022ʼ ಬಿಡುಗಡೆ ಮಾಡಿವೆ.

ದೇಶದಲ್ಲಿ ಉದ್ಯೋಗದ ಪರಿಸ್ಥಿತಿ ಕಳಪೆಯಾಗಿದೆ; ನಿರುದ್ಯೋಗದ ಸಮಸ್ಯೆ ಯುವಜನರಲ್ಲಿ, ವಿಶೇಷವಾಗಿ, ನಗರ ಪ್ರದೇಶಗಳಲ್ಲಿನ ವಿದ್ಯಾವಂತ ಯುವಜನರಲ್ಲಿ ಹೆಚ್ಚುಇದೆ ಎಂಬ ಅಂಶವನ್ನು ವರದಿ ಎತ್ತಿ ತೋರಿಸಿದೆ. ವರದಿಯನ್ನು ಬಿಡುಗಡೆ ಮಾಡಿದ ಮುಖ್ಯ ಆರ್ಥಿಕ ಸಲಹೆಗಾರ ವಿ .ಅನಂತ ನಾಗೇಶ್ವರನ್, ʻಉದ್ಯಮಗಳು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕು; ಪ್ರತಿಯೊಂದು ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗೆ ಸರ್ಕಾರದ ಮಧ್ಯಸ್ಥಿಕೆ ವಹಿಸಬೇಕು ಎಂದು ಭಾವಿಸುವುದು ಸರಿಯಲ್ಲʼ ಎಂದು ಹೇಳಿದರು.

ಕೌಶಲಾಭಿವೃದ್ಧಿ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), ಆತ್ಮನಿರ್ಭರ ಭಾರತ್ ರೋಜ್‌ಗಾರ್ ಯೋಜನೆ, ಉದ್ಯೋಗದಾತರಿಗೆ ವೇತನ ಕಡಿತಕ್ಕೆ ಅವಕಾಶ ನೀಡುವ ಹೊಸ ತೆರಿಗೆ ನಿಯಮ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಅಡಿ ಹೊಸ ಉದ್ಯೋಗಿಗಳಿಗೆ ಉದ್ಯೋಗದಾತರಿಂದ ಕಂತು ಪಾವತಿ ಸೇರಿದಂತೆ ಹಲವಾರು ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕೌಶಲಾಭಿವೃದ್ಧಿ ಉಪಕ್ರಮಗಳಿಗೆ ಸಂಬಂಧಿಸಿದಂತೆ, ಬೋಧಕರ ಅಲಭ್ಯತೆ ಮತ್ತು ಮಧ್ಯದಲ್ಲೇ ಕೋರ್ಸ್ ತೊರೆಯುವುದನ್ನು ತಪ್ಪಿಸುವ ಅವಕಾಶವಿದೆ.‌ ಸರ್ಕಾರ ಈ ಬಗ್ಗೆ ಗಮನಹರಿಸುತ್ತದೆ ಎಂದು ಹೇಳಿದರು.

ವೇತನ ಸ್ಥಗಿತ ಅಥವಾ ಇಳಿಮುಖ: 2000-2019 ರಿಂದ ಉದ್ಯೋಗ ದರವು ದೀರ್ಘಾವಧಿಯ ಕುಸಿತ ಕಂಡಿದ್ದು, ಇತ್ತೀಚಿನ ವರ್ಷಗಳಲ್ಲಿಒಟ್ಟು ಕಾರ್ಮಿಕ ಬಲದ ಭಾಗವಹಿಸು ವಿಕೆ, ಉದ್ಯೋಗಿಗಳ ಭಾಗವಹಿಸುವಿಕೆ ಮತ್ತು ಉದ್ಯೋಗ ದರಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಆದರೆ, ಉದ್ಯೋಗದ ಪರಿಸ್ಥಿತಿ ಕಳಪೆಯಾಗಿದೆ ಎಂದು ವರದಿ ಹೇಳಿದೆ. ಮಹಿಳೆಯರು ಹೆಚ್ಚಾಗಿ ಸ್ವಯಂ ಉದ್ಯೋಗ ಮತ್ತು ವೇತನರಹಿತ ಕೌಟುಂಬಿಕ ಕೆಲಸದಲ್ಲಿರುತ್ತಾರೆ; ಯುವಜನರ ಉದ್ಯೋಗದ ಗುಣಮಟ್ಟ ವಯಸ್ಕರ ಉದ್ಯೋಗದ ಗುಣಮಟ್ಟಕ್ಕಿಂತ ಕಳಪೆಯಾಗಿದೆ. ವೇತನ ಮತ್ತು ಗಳಿಕೆ ನಿಶ್ಚಲವಾಗಿವೆ ಇಲ್ಲವೇ ಕುಸಿಯುತ್ತಿವೆ ಎಂದು ವರದಿ ಹೇಳಿದೆ.

ವಿದ್ಯಾವಂತ ಯುವಜನರಿಗೆ ಬಿಕ್ಕಟ್ಟು: ಯುವಜನರಲ್ಲಿ ನಿರುದ್ಯೋಗ, ವಿಶೇಷವಾಗಿ, ಮಾಧ್ಯಮಿಕ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷಣ ಹೊಂದಿರುವವರಲ್ಲಿ ನಿರುದ್ಯೋಗ ಕಾಲ ಕ್ರಮೇಣ ತೀವ್ರಗೊಂಡಿದೆ ಎಂದು ವರದಿ ಗಮನಿಸಿದೆ. ಒಟ್ಟು ನಿರುದ್ಯೋಗಿ ಜನಸಂಖ್ಯೆಯಲ್ಲಿ ಶಿಕ್ಷಿತರ ಪಾಲು 2000ರಲ್ಲಿ ಶೇ.54.2 ರಿಂದ 2022 ರಲ್ಲಿ ಶೇ. 65.7 ಕ್ಕೆ ಏರಿತು. ವಿದ್ಯಾವಂತ ನಿರುದ್ಯೋಗಿ ಯುವಜನರಲ್ಲಿ (ಮಾಧ್ಯಮಿಕ ಹಂತ ಅಥವಾ ಉನ್ನತ ಶಿಕ್ಷಣ ಪಡೆದವರು) ಯುವಕರಿಗಿಂತ (ಶೇ 62.2) ಯುವತಿಯರು ಹೆಚ್ಚು ಪಾಲು ಹೊಂದಿದ್ದಾರೆ (ಶೇ. 76.7).

ಕಾರ್ಮಿಕ-ತೀವ್ರ ಉತ್ಪಾದನೆಗೆ ಆದ್ಯತೆ; ಮುಂದಿನ ದಶಕದಲ್ಲಿ ದೇಶ ವಾರ್ಷಿಕ 7-8 ದಶಲಕ್ಷ ಯುವಜನರನ್ನು ಕಾರ್ಮಿಕ ಬಲಕ್ಕೆ ಸೇರಿಸುವ ಸಾಧ್ಯತೆಯಿದೆ. ಉತ್ಪಾದಕ ಕೃಷಿಯೇತರ ಉದ್ಯೋಗವನ್ನು ಹೆಚ್ಚಿಸಲು ಆರ್ಥಿಕ ಕಾರ್ಯನೀತಿಗಳು ಅಗತ್ಯ ಎಂದು ವರದಿ ಹೇಳಿದೆ. ಅಧಿಕ ಸಂಖ್ಯೆಯಲ್ಲಿರುವ ಕೌಶಲರಹಿತ ಕಾರ್ಮಿಕರಿಗೆ ಉದ್ಯೋಗ ಪೂರೈಸಲು, ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಅಗತ್ಯವಿರುವ ಉದ್ಯೋಗಗಳಿಗೆ ಆದ್ಯತೆ ನೀಡಬೇಕಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹೆಚ್ಚು ಬೆಂಬಲ ನೀಡಬೇಕಿದೆ. ವರದಿಯು ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆ ಮತ್ತು ಉತ್ಪಾದನೆಗೆ ಕ್ಲಸ್ಟರ್ ಆಧಾರಿತ ವಿಧಾನವನ್ನು ಒತ್ತಿಹೇಳಿದೆ.

ಐದು ಪ್ರಮುಖ ಕ್ಷೇತ್ರಗಳಲ್ಲಿ ಕ್ರಿಯೆ: ಹೆಚ್ಚಿನ ಕ್ರಮಕ್ಕಾಗಿ ಐದು ಪ್ರಮುಖ ಕಾರ್ಯನೀತಿ ಕ್ಷೇತ್ರಗಳನ್ನು ವರದಿ ಸೂಚಿಸಿದೆ: ಅವುಗಳೆಂದರೆ, · ಉದ್ಯೋಗ ಸೃಷ್ಟಿಯನ್ನುಉತ್ತೇಜಿಸುವುದು · ಉದ್ಯೋಗದ ಗುಣಮಟ್ಟದ ಸುಧಾರಣೆ · ಕಾರ್ಮಿಕ ಮಾರುಕಟ್ಟೆಯ ಅಸಮಾನತೆಗಳನ್ನು ಪರಿಹರಿಸುವುದು · ಕೌಶಲಗಳನ್ನು ಮತ್ತು ಸಕ್ರಿಯ ಕಾರ್ಮಿಕ ಮಾರುಕಟ್ಟೆ ನೀತಿಗಳನ್ನು ಬಲಪಡಿಸುವುದು · ಕಾರ್ಮಿಕ ಮಾರುಕಟ್ಟೆಯ ವಿನ್ಯಾಸ ಮತ್ತು ಯುವಜನರ ಉದ್ಯೋಗದಲ್ಲಿನ ಜ್ಞಾನದ ಕಂದರವನ್ನು ಭರ್ತಿ ಮಾಡುವುದು

ರಾಜ್ಯ ಸರ್ಕಾರ, ಖಾಸಗಿ ವಲಯದ ಪಾತ್ರ: ಯುವಜನರಿಗೆ ಹೆಚ್ಚು ಉದ್ಯೋಗ ಒದಗಿಸುವ ಸಾಧ್ಯತೆಯಿರುವ ಡಿಜಿಟಲ್ ಆರ್ಥಿಕತೆ ಮತ್ತು ಆರೈಕೆ ವಲಯದಲ್ಲಿ ದೇಶ ಹೂಡಿಕೆ ಮಾಡಬೇಕಿದೆ ಮತ್ತು ನಿಯಂತ್ರಿಸುವ ಅಗತ್ಯವಿದೆ. ದೇಶದಲ್ಲಿ ನಗರೀಕರಣ ಮತ್ತು ವಲಸೆ ಹೆಚ್ಚುವ ನಿರೀಕ್ಷೆ ಇರುವುದರಿಂದ ವಲಸಿಗರು, ಮಹಿಳೆಯರು ಮತ್ತು ಬಡ ಯುವಜನರ ಅಗತ್ಯಗಳನ್ನು ಪೂರೈಸಲು ದೇಶವು ಒಳಗೊಳ್ಳುವ ನಗರ ನೀತಿಗಳನ್ನು ಅಭಿವೃದ್ಧಿಪ ಡಿಸಬೇಕಿದೆ. ಕೌಶಲ ಅಭಿವೃದ್ಧಿ ಮತ್ತು ಕಾರ್ಮಿಕ ಮಾರುಕಟ್ಟೆಯ ನೀತಿಗಳು ಉದ್ಯೋಗದ ಪೂರೈಕೆ-ಬೇಡಿಕೆ ಕಂದರವನ್ನು ಕಡಿಮೆ ಮಾಡುವಲ್ಲಿ ಮತ್ತು ಒಟ್ಟಾರೆ ಕಾರ್ಮಿಕ ಮಾರುಕಟ್ಟೆಯನ್ನು ಒಳಗೊಳ್ಳುವಂತೆ ಮಾಡುವಲ್ಲಿ ಪರಿಣಾಮಕಾರಿ ಆಗಿರಬೇಕು. ಅಂತಿಮವಾಗಿ, ರಾಜ್ಯಸರ್ಕಾರಗಳು ಖಾಸಗಿ ವಲಯ ಮತ್ತು ಇನ್ನಿತರ ಭಾಗಿದಾರರೊಂದಿಗೆ ಬಲಿಷ್ಠ ಪಾಲುದಾರಿಕೆ ಮೂಲಕ ಭಾರಿ ಮತ್ತು ಹೆಚ್ಚು ಗುರಿ ನಿರ್ದೇಶಿತ ಪಾತ್ರ ವಹಿಸಬೇಕೆಂದು ಸೂಚಿಸುತ್ತದೆ.

Read More
Next Story