ಕಳ್ಳಸಾಗಣೆ: ಡಿಎಂಕೆ ಮಾಜಿ ಕಾರ್ಯಾಧ್ಯಕ್ಷ ಮತ್ತಿತರರ ಮೇಲೆ ಇಡಿ ದಾಳಿ
x

ಕಳ್ಳಸಾಗಣೆ: ಡಿಎಂಕೆ ಮಾಜಿ ಕಾರ್ಯಾಧ್ಯಕ್ಷ ಮತ್ತಿತರರ ಮೇಲೆ ಇಡಿ ದಾಳಿ


ಚೆನ್ನೈ, ಏಪ್ರಿಲ್ 9- ಡಿಎಂಕೆ ಮಾಜಿ ಕಾರ್ಯಾಧ್ಯಕ್ಷ ಜಾಫರ್ ಸಾದಿಕ್ ಮತ್ತು ಇತರರ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಸಂಬಂಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ತಮಿಳುನಾಡಿನ ಹಲವೆಡೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ, ಮಧುರೈ ಮತ್ತು ತಿರುಚಿರಾಪಳ್ಳಿಯ 25 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು, ಕೇಂದ್ರ ಅರೆಸೇನಾ ಪಡೆಗಳ ಬೆಂಗಾವಲಿನಲ್ಲಿ ಶೋಧ ನಡೆಸಿದ್ದಾರೆ. ತಮಿಳು ಸಿನೆಮಾ ನಿರ್ಮಾಪಕರೂ ಆಗಿರುವ ಸಾದಿಕ್, ಚಿತ್ರ ನಿರ್ದೇಶಕ ಅಮೀರ್ ಮತ್ತು ಇತರರ ಮನೆ ಸೇರಿದಂತೆ ಹಲವೆಡೆ ಶೋಧ ನಡೆದಿದೆ ಎಂದರು.

2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ 3,500 ಕೆಜಿ ಸೂಡೊಎಫಿಡ್ರಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಾದಿಕ್(36) ಅವರನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಕಳೆದ ತಿಂಗಳು ಬಂಧಿಸಿತ್ತು.ಈ ಪ್ರಕರಣ ಮತ್ತು ಇತರ ಕೆಲವು ಎಫ್‌ಐಆರ್‌ಗಳಡಿ ಸಾದಿಕ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣವನ್ನು ದಾಖಲಿಸಿದೆ. ತಮಿಳು ಮತ್ತು ಹಿಂದಿ ಚಲನಚಿತ್ರ ನಿರ್ಮಾಸಪಕರೊಂದಿಗೆ ಸಾದಿಕ್ ಅವರ ಸಂಪರ್ಕ, ಕೆಲವು ʻಉನ್ನತʼ ವರ್ಗದ ವ್ಯಕ್ತಿಗಳು ಮತ್ತು ʻರಾಜಕೀಯ ನೆರವು ನೀಡಿಕೆʼಯನ್ನು ಪರಿಶೀಲಿಸಲಾಗುತ್ತಿದೆ ಎಂದು ಎನ್‌ಸಿಬಿ ಹೇಳಿದೆ.

ಸಾದಿಕ್ ಅವರನ್ನು ಫೆಬ್ರವರಿಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದಿಂದ ಹೊರಹಾಕಿತ್ತು.

Read More
Next Story