Economic Survey 2025 | ಶೇ.6.3- 6.8 ರಷ್ಟು ಆರ್ಥಿಕ ಬೆಳವಣಿಗೆ ದರ ನಿರೀಕ್ಷೆ
ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ಬಾಹ್ಯ ಬೆಳವಣಿಗೆಗಿಂತ ದೇಶೀಯ ಬೆಳವಣಿಗೆ ಆಧಾರವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಶೇ.6.3 ರಿಂದ ಶೇ. 6.8 ರಷ್ಟು ಆರ್ಥಿಕ ಬೆಳವಣಿಗೆ ದರ ನಿರೀಕ್ಷಿಸಲಾಗಿದೆ ಎಂದು 2024-25 ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.
ಸಂಸತ್ತಿನಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರ್ಥಿಕ ಸಮೀಕ್ಷೆಯು ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ಬಾಹ್ಯ ಬೆಳವಣಿಗೆಗಿಂತ ದೇಶೀಯ ಬೆಳವಣಿಗೆಗಳು ಆಧಾರವಾಗಲಿವೆ ಎಂದು ತಿಳಿಸಿದೆ.
ಬಲಿಷ್ಠವಾಗುತ್ತಿರುವ ದೇಶಿಯ ಆರ್ಥಿಕತೆ, ಇಳಿಯುತ್ತಿರುವ ನಿರುದ್ಯೋಗ ದರ, ಸ್ಥಿರ ಹಣದುಬ್ಬರದ ಜೊತೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆ ಕಾಯ್ದುಕೊಳ್ಳಲು ಮತ್ತಷ್ಟು ಸುಧಾರಣೆ ಕ್ರಮಗಳ ಅಗತ್ಯವನ್ನು ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.
2020-21ರಲ್ಲಿ ಕೋವಿಡ್ ನಿಂದಾಗಿ ಆರ್ಥಿಕ ಅಭಿವೃದ್ಧಿ ದರ ಶೇ.5.8 ಕ್ಕೆ ಇಳಿದು ಋಣಾತ್ಮಕ ಬೆಳವಣಿಗೆ ದರ ದಾಖಲಿಸಿತ್ತು. ಇದು ಜಿಡಿಪಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. 2021-22ನೇ ಸಾಲಿನಲ್ಲಿ ಜಿಡಿಪಿ ದರ ಶೇ. 9.7 ರಷ್ಟು ದಾಖಲಿಸುವ ಮೂಲಕ ಆರ್ಥಿಕತೆ ವೇಗ ಪಡೆದಿತ್ತು. 2022-23ರಲ್ಲಿ ಶೇ.7ಕ್ಕೆ ಇಳಿದಿತ್ತು. 2023-24 ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ ಮತ್ತೆ ಶೇ. 8.2 ಕ್ಕೆ ಏರಿಕೆಯಾಗಿತ್ತು.
ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
• ತರಕಾರಿ ಬೆಲೆಗಳ ಸಮಯೋಚಿತ ಇಳಿಕೆ, ಖಾರಿಫ್ ಸುಗ್ಗಿಯಿಂದ ಆಹಾರ ಹಣದುಬ್ಬರ ಪ್ರಸಕ್ತ ವರ್ಷದ ಕೊನೆಯಲ್ಲಿ ನಿಧಾನವಾಗುವ ಸಾಧ್ಯತೆಯಿದೆ.
• ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ನಿರೀಕ್ಷೆಗಳು ಸಮತೋಲನ ಕಾಯ್ದುಕೊಳ್ಳಲಿವೆ.
• ಜಾಗತಿಕ ಅಡೆತಡೆ ನಿವಾರಿಸಲು ಕಾರ್ಯತಂತ್ರ, ವಿವೇಚನಾಯುತ ನೀತಿ ನಿರ್ವಹಣೆ ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದೆ.
• ತಳಮಟ್ಟದ ರಚನಾತ್ಮಕ ಸುಧಾರಣೆ ಮತ್ತು ಅನಿಯಂತ್ರಣದ ಮೂಲಕ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಬೇಕಾಗಿದೆ.
• AI ಗೆ ಸೂಕ್ತ ಆಡಳಿತಾತ್ಮಕ ಚೌಕಟ್ಟಿನ ಕೊರತೆಯು ತಂತ್ರಜ್ಞಾನದ ದುರುಪಯೋಗಕ್ಕೆ ಕಾರಣವಾಗಬಹುದು.
• ʼದಿವಾಳಿತನ ಕಾನೂನಿನ ಪ್ರತಿಬಂಧಕʼದ ಪರಿಣಾಮವಾಗಿ ಆರಂಭಿಕ ಹಂತಗಳಲ್ಲಿ ಸಾಲಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.