ಇವಿಎಂ ಪರಿಶೀಲನೆ: ಚುನಾವಣೆ ಆಯೋಗಕ್ಕೆ ಎಂಟು ಮನವಿ
x

ಇವಿಎಂ ಪರಿಶೀಲನೆ: ಚುನಾವಣೆ ಆಯೋಗಕ್ಕೆ ಎಂಟು ಮನವಿ


ಹೊಸದಿಲ್ಲಿ, ಜೂ.20- ಚುನಾವಣೆ ಆಯೋಗವು ಇವಿಎಂಗಳಲ್ಲಿ ಅಳವಡಿಸಿರುವ ಮೈಕ್ರೋ ಕಂಟ್ರೋಲರ್‌ ಚಿಪ್‌ಗಳ ತಿದ್ದುವಿಕೆ ಅಥವಾ ಮಾರ್ಪಾಡಿನ ಪರಿಶೀಲನೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳಿಂದ ಜೂನ್ 4ರಂದು ಎಂಟು ಅರ್ಜಿಗಳನ್ನು ಸ್ವೀಕರಿಸಿದೆ.

ಇವಿಎಂಗಳ ದುರ್ಬಳಕೆ ʻಆಧಾರರಹಿತʼ ಎಂದಿದ್ದ ಸುಪ್ರೀಂ ಕೋರ್ಟ್, ಹಳೆಯ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಹಿಂತಿರುಗುವ ಬೇಡಿಕೆಯನ್ನು ಏಪ್ರಿಲ್ 26 ರಂದು ತಿರಸ್ಕರಿಸಿತ್ತು.

ಆದರೆ, ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ ಅಭ್ಯರ್ಥಿಗಳಿಗೆ ಪ್ರತಿ ವಿಧಾನಸಭೆ ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿ ಅಳವಡಿಸಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳನ್ನು ಪರಿಶೀಲಿಸಲು ಅವಕಾಶ ನೀಡಿತ್ತು. ಇದಕ್ಕಾಗಿ ಚುನಾವಣೆ ಆಯೋಗಕ್ಕೆ ಶುಲ್ಕ ಪಾವತಿ ಮಾಡಬೇಕಿತ್ತು.

ಬಿಜೆಪಿಯ ಅಹಮದ್‌ನಗರ (ಮಹಾರಾಷ್ಟ್ರ) ಅಭ್ಯರ್ಥಿ ಸುಜಯ್ ವಿಖೆ ಪಾಟೀಲ್ 40 ಮತಗಟ್ಟೆಗಳಲ್ಲಿ ಇವಿಎಂ ಪರಿಶೀಲನೆಗೆ ಕೋರಿದ್ದಾರೆ. ಅವರು ಎನ್‌ಸಿಪಿ (ಶರದ್ ಪವಾರ್) ಬಣದ ನೀಲೇಶ್ ಲಂಕೆ ವಿರುದ್ಧ ಸೋತಿದ್ದರು.

ಆಯೋಗದ ಮಾಹಿತಿ ಪ್ರಕಾರ, ವೈಎಸ್‌ಆರ್‌ಸಿಪಿ ಮತ್ತು ಡಿಎಂಡಿಕೆ ಅಭ್ಯರ್ಥಿ ಕೂಡ ಇವಿಎಂ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ. ಆರು ರಾಜ್ಯಗಳ ಎಂಟು ಸಂಸದೀಯ ಕ್ಷೇತ್ರಗಳ 92 ಮತಗಟ್ಟೆಗಳ ಇವಿಎಂ ಪರಿಶೀಲನೆಗೆ ಮನವಿ ಸಲ್ಲಿಕೆಯಾಗಿದೆ.

ಜೂನ್ 1 ರಂದು ಆಯೋಗ ಹೊರಡಿಸಿದ ಮಾದರಿ ಕಾರ್ಯವಿಧಾನ(ಎ‌ಸ್‌ಒಪಿ) ಪ್ರಕಾರ, ಇವಿಎಂಗಳ ಪರಿಶೀಲನೆಗೆ ಇವಿಎಂ ಒಂದಕ್ಕೆ 47,200 ರೂ. ಪಾವತಿಸಬೇಕಾಗುತ್ತದೆ. ಇದು ಇವಿಎಂ ಪರಿಶೀಲನೆಗೆ ಬಿಇಎಲ್ ಮತ್ತು ಇಸಿಐಎಲ್ ಸಲ್ಲಿಸಿದ ವೆಚ್ಚವಾಗಿದೆ. ತಯಾರಕರಿಗೆ ತಗಲಿದ ವೆಚ್ಚದ ಜೊತೆಗೆ, ಘಟಕಗಳ ಸಾಗಣೆಗೆ ಕಾರ್ಮಿಕರ ವೆಚ್ಚ, ಸಿಸಿಟಿವಿ ಕವರೇಜ್, ವಿದ್ಯುತ್ ಶುಲ್ಕ, ವಿಡಿಯೋಗ್ರಫಿ ವೆಚ್ಚ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮಟ್ಟದಲ್ಲಿ ವಿವಿಧ ಕಾರ್ಯಾಚರಣೆ ವೆಚ್ಚ ಇದರಲ್ಲಿ ಸೇರಿದೆ. ಇವಿಎಂ ಸೆಟ್ ಒಂದು ಬ್ಯಾಲೆಟ್ ಯುನಿಟ್, ಒಂದು ಕಂಟ್ರೋಲ್ ಯುನಿಟ್ ಮತ್ತು ವಿವಿ ಪ್ಯಾಟ್‌ ಯಂತ್ರವನ್ನು ಹೊಂದಿರುತ್ತದೆ.

ಜೂನ್ 4 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಆಂಧ್ರ ಪ್ರದೇಶದ ವೈಎಸ್‌ಆರ್‌ಸಿಪಿ ಮತ್ತು ಒಡಿಷಾದ ಬಿಜೆಡಿ ಅಭ್ಯರ್ಥಿಗಳು ಪರಿಶೀಲನೆಗೆ ಚೆಕ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಜತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ನಡೆದಿವೆ.

ಮೂರು ವಿಧಾನಸಭಾ ಕ್ಷೇತ್ರಗಳ 26 ಮತಗಟ್ಟೆಗಳಲ್ಲಿ ಪರಿಶೀಲನೆ ಕೋರಲಾಗಿದೆ. ಮಾದರಿ ಕಾರ್ಯವಿಧಾನದ ಪ್ರಕಾರ, ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಫಲಿತಾಂಶ ಪ್ರಕಟಗೊಂಡ 30 ದಿನಗಳ ಒಳಗೆ ಅರ್ಜಿದಾರರ ಕ್ರೋಢೀಕೃತ ಪಟ್ಟಿಯನ್ನು ತಯಾರಕರಿಗೆ ತಿಳಿಸಬೇಕಿದೆ(ಜುಲೈ 4 ರೊಳಗೆ). ಸಿಇಒಗಳು ಈಗಾಗಲೇ ಮಾಹಿತಿ ನೀಡಿದ್ದಾರೆ.

Read More
Next Story