Mann Ki Baat :ತಂತ್ರಜ್ಞಾನ ಬಳಸಿ ಪ್ರಜೆಗಳ ಶಕ್ತಿ ಹೆಚ್ಚಿಸಿದ ಚುನಾವಣಾ ಆಯೋಗ: ಪ್ರಧಾನಿ ಮೋದಿ
x
ನರೇಂದ್ರ ಮೋದಿ

Mann Ki Baat :ತಂತ್ರಜ್ಞಾನ ಬಳಸಿ ಪ್ರಜೆಗಳ ಶಕ್ತಿ ಹೆಚ್ಚಿಸಿದ ಚುನಾವಣಾ ಆಯೋಗ: ಪ್ರಧಾನಿ ಮೋದಿ

Mann Ki Baat : ಚುನಾವಣಾ ಆಯೋಗ ಬಿಜೆಪಿ ಪರ ಕೆಲಸ ಮಾಡುತ್ತಿದೆ ಹಾಗೂ ಇವಿಎಂ ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿ ಮೋದಿ ಈ ಹೇಳಿಕೆ ನೀಡಿದ್ದಾರೆ.


ಚುನಾವಣಾ ಆಯೋಗವು ಪ್ರಜೆಗಳ ಶಕ್ತಿ ಬಲಪಡಿಸಲು ತಂತ್ರಜ್ಞಾನದ ಶಕ್ತಿ ಬಳಸಿದೆ. ನ್ಯಾಯಸಮ್ಮತ ಮತದಾನ ಪ್ರಕ್ರಿಯೆಗೆ ಬದ್ಧತೆ ತೋರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ. ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ʼಮನ್‌ಕಿ ಬಾತ್‌ನಲ್ಲಿʼ (Mann Ki Baat) ಮಾತನಾಡಿದ ಅವರು ಪ್ರತಿಪಕ್ಷಗಳು ಚುನಾವಣಾ ಆಯೋಗದ ಮೇಲೆ ಮಾಡುತ್ತಿರುವ ಟೀಕೆಗಳನ್ನು ಪರೋಕ್ಷವಾಗಿ ವಿರೋಧಿಸಿದರು.

ಜನವರಿ 25 ರಾಷ್ಟ್ರೀಯ ಮತದಾರರ ದಿನವಾಗಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂಬ ಟೀಕೆಗಳಿಗೆ ಪರೋಕ್ಷ ಉತ್ತರ ಕೊಟ್ಟಿದ್ದಾರೆ.

ಚುನಾವಣಾ ಆಯೋಗವು ಕಾಲಕಾಲಕ್ಕೆ ಚುನಾವಣಾ ಪ್ರಕ್ರಿಯೆಗಳನ್ನು ಆಧುನೀಕರಣಗೊಳಿಸಿದೆ ಮತ್ತು ಬಲಪಡಿಸಿದೆ ಎಂದು ಮೋದಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮೋದಿ ಕೋರಿದರು.

ಇವಿಎಂಗೆ ಬೆಂಬಲ

ವಿದ್ಯುನ್ಮಾನ ಮತದಾನ ಯಂತ್ರಗಳ (ಇವಿಎಂ) ಸಮಗ್ರತೆಯ ಬಗ್ಗೆ ವಿರೋಧ ಪಕ್ಷಗಳು ಹೆಚ್ಚೆಚ್ಚು ಪ್ರಶ್ನೆಗಳನ್ನು ಎತ್ತುತ್ತಿವೆ. ಹೀಗಾಗಿ ಮೋದಿ ಹೇಳಿಕೆಗಳನ್ನು ಇವಿಎಂಗಳಿಗೆ ನೀಡಿದ ಬೆಂಬಲ ಎಂದು ವಿಶ್ಲೇಷಿಸಬಹುದು.

ಸ್ವಾತಂತ್ರ್ಯ ಪಡೆದ ನಂತರ ಪ್ರಜಾಪ್ರಭುತ್ವವಾಗಿ ಭಾರತದ ಕಾರ್ಯಸಾಧ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಯಿತು. ಆ ಅಭಿಪ್ರಾಯಗಳನ್ನು ತಪ್ಪೆಂದು ಸಾಬೀತುಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಅಲ್ಲದೆ ʼಭಾರತವು ಪ್ರಜಾಪ್ರಭುತ್ವದ ತಾಯಿʼ ಎಂದು ಅವರು ಹೇಳಿದರು.

ಮುಂದಿನ ಭಾನುವಾರ ಗಣರಾಜ್ಯೋತ್ಸವವಾಗಿರುವುದರಿಂದ ʼಮನ್‌ ಕಿ ಬಾತ್‌ʼ ಕಾರ್ಯಕ್ರಮವನ್ನು ತಿಂಗಳ ಕೊನೆಯ ಭಾನುವಾರಕ್ಕೆ ಬದಲಾಗಿ ಈ ತಿಂಗಳ ಮೂರನೇ ಭಾನುವಾರ ನಡೆಸಲಾಗಿದೆ.

ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಭೀಮ್ ರಾವ್ ಅಂಬೇಡ್ಕರ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಸೇರಿದಂತೆ ಕೆಲವು ಸದಸ್ಯರ ಕಾರ್ಯಗಳನ್ನು ಮೋದಿ ಸ್ಮರಿಸಿದರು.

"ನಮ್ಮ ಸಂವಿಧಾನ ರಚನಾಕಾರರು ಹೆಮ್ಮೆ ಪಡುವಂತಹ ಭಾರತವನ್ನು ನಿರ್ಮಿಸಲು ನಾವು ಅವರಿಂದ ಸ್ಫೂರ್ತಿ ಪಡೆಯಬೇಕು" ಎಂದು ಮೋದಿ ಹೇಳಿದರು.

ಗಣರಾಜ್ಯೋತ್ಸವವು ಸಂವಿಧಾನದ ಅನುಷ್ಠಾನದ 75 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ ಎಂದು ಅವರು ಹೇಳಿದರು.

ಕುಂಭ ಮೇಳಕ್ಕೆ ಹೊಗಳಿಕೆ

ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಅಲ್ಲಿ ವಿವಿಧ ಜಾತಿ ಮತ್ತು ಪ್ರದೇಶಗಳ ಜನರು ಒಗ್ಗೂಡಿದ್ದಾರೆ ಎಂದು ಹೇಳಿದ ಅವರು ಮೇಳದಲ್ಲಿ ಯಾವುದೇ ರೀತಿಯ ತಾರತಮ್ಯ ನಡೆಯುತ್ತಿಲ್ಲ ಎಂದು ಹೇಳಿದರು.

ಬೃಹತ್ ಮೇಳದಲ್ಲಿ ಯುವಕರು ಭಾಗವಹಿಸುತ್ತಿದ್ದಾರೆ. ಇದು ನಾಗರಿಕತೆಯ ಬೇರುಗಳನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದರು.

ಈ ಕಾರ್ಯಕ್ರಮದ ಜಾಗತಿಕ ಜನಪ್ರಿಯತೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

Read More
Next Story