ಭಾರತ್‌ ಮಾತಾಕಿ ಜೈ ಎನ್ನಲು ಅನುಮತಿ ಪಡೆಯಬೇಕೆ? ಮೈಸೂರಿನಲ್ಲಿ ಮೋದಿ ವಾಗ್ದಾಳಿ
x

ಭಾರತ್‌ ಮಾತಾಕಿ ಜೈ ಎನ್ನಲು ಅನುಮತಿ ಪಡೆಯಬೇಕೆ? ಮೈಸೂರಿನಲ್ಲಿ ಮೋದಿ ವಾಗ್ದಾಳಿ

ಕನ್ನಡದಲ್ಲೇ ಭಾಷಣ ಶುರು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, “ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ” ಎಂದು ಮಾತು ಆರಂಭಿಸಿದರು.


ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಶುರು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, “ಚೈತ್ರ ನವರಾತ್ರಿಯ ಪುಣ್ಯ ದಿನದಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿರುವುದು ನನ್ನ ಸೌಭಾಗ್ಯ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ” ಎಂದು ಮಾತು ಆರಂಭಿಸಿದರು.

ಬಳಿಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಈ ದೇಶದಲ್ಲಿ ಭಾರತ್‌ ಮಾತಾ ಕೀ ಜೈ ಎನ್ನಲು ಕೂಡ ಅನುಮತಿ ಪಡೆಯಬೇಕೆ?” ಎಂದು ಪ್ರಶ್ನಿಸಿದರು.

ಕೆಲ ದಿನಗಳ ಹಿಂದೆ ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ಅವರು, ಭಾಷಣಕ್ಕೂ ಮುನ್ನ ವೇದಿಕೆಯಲ್ಲಿ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿ ಪಡೆದು ಭಾರತ್‌ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು. ಇದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶವನ್ನು ಮಾರಲು, ಒಡೆಯಲು ಮತ್ತು ಬಲಹೀನ ಮಾಡಲು ಕಾಂಗ್ರೆಸ್‌ಗೆ ಕೆಟ್ಟ ಐಡಿಯಾಗಳಿವೆ. ಅದು ಈಗಲೂ ಮುಂದುವರಿದಿದೆ. ಆರ್ಟಿಕಲ್‌ 370 ಬಗ್ಗೆ ರಾಜಸ್ಥಾನದಲ್ಲಿ ಮಾತನಾಡುವ ಅಗತ್ಯವೇನು ಎಂದು ಎಐಸಿಸಿ ಅಧ್ಯಕ್ಷರೇ ಕೇಳುತ್ತಾರೆ. ಕಾಶ್ಮೀರದ ಬಗ್ಗೆ ಉಳಿದ ರಾಜ್ಯಕ್ಕೆ ಸಂಬಂಧವೇನು ಎಂದು ಕಾಂಗ್ರೆಸ್‌ ಕೇಳುತ್ತದೆ. ಕರ್ನಾಟಕ ಜನತೆ ಕೂಡ ಇದಕ್ಕೆ ಸಾಕ್ಷಿಯಾಗಿದ್ದಾರೆ. ಭಾರತದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್‌ ಪುರಸ್ಕರಿಸುತ್ತದೆ ಎಂದು ಅವರು ಆರೋಪಿಸಿದರು.

ಭಾರತದ ವಿರೋಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ನೀಡುತ್ತದೆ. ಕಾಂಗ್ರೆಸ್‌ನ ಚುನಾವಣಾ ಸಮಾವೇಶದಲ್ಲಿ ಭಾರತ್‌ ಮಾತಾ ಕೀ ಜೈ ಎನ್ನಲು ವೇದಿಕೆಯಲ್ಲಿದ್ದ ನಾಯಕರ ಅನುಮತಿ ಪಡೆದು ಘೋಷಣೆ ಕೂಗಲಾಗಿತ್ತು. ಭಾರತ್‌ ಮಾತಾಕೀ ಜೈ ಎನ್ನಲು ಅನುಮತಿ ಕೇಳುವ ಮಟ್ಟಕ್ಕೆ ಕಾಂಗ್ರೆಸ್‌ ನಾಯಕರು ಇಳಿದಿದ್ದಾರೆ ಎಂದು ಮೋದಿ ಹೇಳಿದರು.

“ಇಂತಹ ಕಾಂಗ್ರೆಸ್‌ ಅನ್ನು ದೇಶ, ಕರ್ನಾಟಕ ಕ್ಷಮಿಸುತ್ತದೆಯೇ? ಮೈಸೂರಿನ ಜನ ಕ್ಷಮಿಸುತ್ತಾರೆಯೇ? ಮೊದಲು ವಂದೇ ಮಾತರಂಗೆ ವಿರೋಧ ಮಾಡಿದರು, ಈಗ ಭಾರತ್‌ ಮಾತಾಕೀ ಜೈ ಎಂದು ಹೇಳಲು ಹಿಂದೇಟು ಹಾಕುತ್ತಿದ್ದಾರೆ, ಇದು ಕಾಂಗ್ರೆಸ್‌ ನ ಅವನತಿ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನವರು ವಿದೇಶಕ್ಕೆ ಹೋಗಿ, ದೇಶವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ದೇಶ ಇಂದು ತನ್ನ ವಿರೋಧಿಗಳಿಗೆ ಎಲ್ಲಾ ರೀತಿಯ ಉತ್ತರ ನೀಡುತ್ತದೆ. ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ಸಾಕ್ಷಿ ಕೇಳುತ್ತದೆ. ಭಯೋತ್ಪಾದನೆಗಾಗಿ ಬ್ಯಾನ್‌ ಮಾಡಲಾದ ಸಂಘಟನೆಯ ರಾಜಕೀಯ ಪಕ್ಷದೊಂದಿಗೆ ಕಾಂಗ್ರೆಸ್‌ ಕೈಜೋಡಿಸುತ್ತದೆ ಎಂದ ಅವರು, ಕರ್ನಾಟಕ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿ, “ಕರ್ನಾಟಕದಲ್ಲಿ ತುಷ್ಟೀಕರಣ ಜೋರಾಗಿ ನಡೆಯುತ್ತಿದೆ. ಹಬ್ಬ ಹರಿದಿನಗಳ ಮೇಲೆ ಕಡಿವಾಣ ಹಾಕಲಾಗುತ್ತಿದೆ. ಧಾರ್ಮಿಕ ಬಾವುಟಗಳನ್ನು ಕೆಳಗಿಳಿಸಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಯಿತು. ಪೂರ್ತಿ ದೇಶ, ಈ ಒಂದು ಕಾರಣದಿಂದ ಒಂದಾಯಿತು. ಆದರೆ, ಕಾಂಗ್ರೆಸ್‌ ಮತ್ತು ಅವರ ಮೈತ್ರಿಕೂಟದವರು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಸಾಧ್ಯವಾದಷ್ಟು ನಮ್ಮ ನಂಬಿಕೆಯನ್ನು ತುಳಿಯುತ್ತಿದ್ದಾರೆ. ಇಂಡಿಯಾ ಮೈತ್ರಿ ಕೂಟದ ನಾಯಕರು ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಶಕ್ತಿಯನ್ನು ವಿನಾಶ ಮಾಡ್ಬೇಕು ಅನ್ನುತ್ತಿದ್ದಾರೆ. ಆದರೆ, ಮೋದಿ ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿಯವರೆಗೆ ಇದು ಯಶಸ್ವಿ ಆಗುವುದಿಲ್ಲ. ಇದು ಮೋದಿ ಗ್ಯಾರಂಟಿ” ಎಂದು ಪ್ರಧಾನಿ ಮೋದಿ ಶಪಥ ಮಾಡಿದರು.

ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌. ಡಿ. ಕುಮಾರಸ್ವಾಮಿ, ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌, ಮಾಜಿ ಶಾಸಕ ರಾಮದಾಸ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಉಪಸ್ಥಿತರಿದ್ದರು.

Read More
Next Story