ಬಿಹಾರ ವಿಧಾನಸಭೆ | ಮಹಾಘಟಬಂಧನ್‌ ಸಭಾತ್ಯಾಗದ ನಡುವೆ ವಿಶ್ವಾಸಮತ ಗೆದ್ದ ನಿತೀಶ್
x

ಬಿಹಾರ ವಿಧಾನಸಭೆ | ಮಹಾಘಟಬಂಧನ್‌ ಸಭಾತ್ಯಾಗದ ನಡುವೆ ವಿಶ್ವಾಸಮತ ಗೆದ್ದ ನಿತೀಶ್


ಬಿಹಾರ ವಿಧಾನಸಭೆಯಲ್ಲಿ ಸೋಮವಾರ ನಡೆದ ವಿಶ್ವಾಸಮತ ಯಾಚನೆಯ ವೇಳೆ, ಪ್ರತಿಪಕ್ಷಗಳ ಮೈತ್ರಿ ಮಹಾಘಟಬಂಧನದ ಸದಸ್ಯರು ಸಭಾತ್ಯಾಗ ಮಾಡಿ ಕಲಾಪದಿಂದ ಹೊರನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸುಲಭವಾಗಿ ವಿಶ್ವಾಸಮತ ಗೆದ್ದರು. ಅವರ ಪರವಾಗಿ 129 ಮತಗಳು ಬಂದವು.

“ನಾನು ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡಿದ್ದೇನೆ. 2005-2010ರ ಒಪ್ಪಂದದಂತೆ (ಬಿಜೆಪಿ-ಎನ್ಡಿಎ) ಕೆಲಸ ಮಾಡಿದ್ದೇನೆ. ಆರ್ಜೆಡಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದಾಗ ನಾನು ಬಿಜೆಪಿ-ಎನ್ಡಿಎಗೆ ಮರಳಿದೆ. ನಂತರ, 2020 ರಲ್ಲಿ, ನಾನು 7 ಭರವಸೆಗಳ ಎರಡನೇ ಹಂತವನ್ನು ಪ್ರಾರಂಭಿಸಿದೆ. ಆದರೆ ಆರ್ಜೆಡಿ ಆಗಲೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಹಾಗಾಗಿ, ನಾನು (ಬಿಜೆಪಿ-ಎನ್ಡಿಎ)ಗೆ ಮತ್ತೆ ಮರಳಿ ಬಂದಿದ್ದೇನೆ ಎಂದು ನಿತೀಶ್ ಕುಮಾರ್ ತಮ್ಮ ಯೂಟರ್ನ್ ರಾಜಕೀಯ ನಡೆಯನ್ನು ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ ಆರ್ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಚೌಧರಿ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು. ಆ ವೇಳೆ ಅವಿಶ್ವಾಸ ನಿರ್ಣಯದ ಪರ 125 ಮತ ಮತ್ತು ವಿರುದ್ಧವಾಗಿ 112 ಮತ ಚಲಾವಣೆಯಾದವು.

ಆರ್‌ಜೆ ಡಿ ಶಾಸಕರು ಆಡಳಿತ ಪಕ್ಷದ ಪೀಠದಲ್ಲಿ!

ಅಧಿಕಾರ ಕಳೆದುಕೊಂಡ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ಕ್ಕೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಆಘಾತ ಕಾದಿತ್ತು. ಅದರ ಮೂವರು ಶಾಸಕರು, ಪಕ್ಷದ ಸಾಲುಗಳ ಆಸನ ತೊರೆದು ಆಡಳಿತ ಪಕ್ಷ ಎನ್ ಡಿಎಯ ಸಾಲಿನಲ್ಲಿ ಕುಳಿತಿದ್ದರು!

ಸ್ಪೀಕರ್ ಚೌಧರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮತದಾನಕ್ಕೂ ಮುನ್ನ ಪಕ್ಷದ ಶಾಸಕರಾದ ಚೇತನ್ ಆನಂದ್, ನೀಲಮ್ ದೇವಿ ಮತ್ತು ಪ್ರಹ್ಲಾದ್ ಯಾದವ್ ಆಡಳಿತಾರೂಢ ಎನ್ಡಿಎ ಸದಸ್ಯರ ನಡುವೆ ಕುಳಿತಿದ್ದರು, ಇದನ್ನು ಕಂಡು ಹೌಹಾರಿದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ ಗೆ ಮನವಿ ಮಾಡಿದರು. ಆದರೆ, ಸಭಾಧ್ಯಕ್ಷರಾಗಿದ್ದ ಉಪಸಭಾಪತಿ ಮಹೇಶ್ವರ್ ಹಜಾರಿ ಆ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Read More
Next Story