ದಸರಾ; ಉತ್ತರ ಪ್ರದೇಶದ ಬರೇಲಿ ವಿಭಾಗದ 4 ಜಿಲ್ಲೆಗಳಲ್ಲಿ ಕಟ್ಟೆಚ್ಚರ, ಇಂಟರ್ನೆಟ್ ಸ್ಥಗಿತ
x

ದಸರಾ; ಉತ್ತರ ಪ್ರದೇಶದ ಬರೇಲಿ ವಿಭಾಗದ 4 ಜಿಲ್ಲೆಗಳಲ್ಲಿ ಕಟ್ಟೆಚ್ಚರ, ಇಂಟರ್ನೆಟ್ ಸ್ಥಗಿತ

ಬರೇಲಿ, ಬದೌನ್, ಪಿಲಿಭಿತ್ ಮತ್ತು ಶಹಜಹಾನ್‌ಪುರ್ ಜಿಲ್ಲೆಗಳಲ್ಲಿ ಪೊಲೀಸ್, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಮತ್ತು ಕ್ಷಿಪ್ರ ಕಾರ್ಯಾಪಡೆ (RAF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


"ಐ ಲವ್ ಮುಹಮ್ಮದ್" ಪೋಸ್ಟರ್ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ನಂತರ, ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ತಡೆಯಲು ಉತ್ತರ ಪ್ರದೇಶ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬರೇಲಿ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಬರೇಲಿ ನಗರದಲ್ಲಿ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಬರೇಲಿ, ಬದೌನ್, ಪಿಲಿಭಿತ್ ಮತ್ತು ಶಹಜಹಾನ್‌ಪುರ್ ಜಿಲ್ಲೆಗಳಲ್ಲಿ ಪೊಲೀಸ್, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಮತ್ತು ಕ್ಷಿಪ್ರ ಕಾರ್ಯಾಪಡೆ (RAF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳ ಮೂಲಕ ಆಯಕಟ್ಟಿನ ಸ್ಥಳಗಳಲ್ಲಿ ನಿಗಾ ವಹಿಸಲಾಗುತ್ತಿದ್ದು, ಇಡೀ ಪ್ರದೇಶವು ಪೊಲೀಸ್ ಕಣ್ಗಾವಲಿನಲ್ಲಿದೆ.

ಇಂಟರ್ನೆಟ್ ಸ್ಥಗಿತಕ್ಕೆ ಕಾರಣವೇನು?

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು ವಾಟ್ಸ್​​ಆ್ಯಪ್​ ಮೂಲಕ ವದಂತಿಗಳು ಹರಡುವುದನ್ನು ಮತ್ತು ಕೋಮು ಪ್ರಚೋದನಕಾರಿ ಸಂದೇಶಗಳನ್ನು ಹಂಚುವುದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಅಕ್ಟೋಬರ್ 2ರ ಮಧ್ಯಾಹ್ನ 3 ಗಂಟೆಯಿಂದ ಅಕ್ಟೋಬರ್ 4ರ ಮಧ್ಯಾಹ್ನ 3 ಗಂಟೆಯವರೆಗೆ ಮೊಬೈಲ್ ಇಂಟರ್ನೆಟ್, ಬ್ರಾಡ್‌ಬ್ಯಾಂಡ್ ಮತ್ತು ಎಸ್‌ಎಂಎಸ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿ ಗೌರವ್ ದಯಾಳ್ ಸ್ಪಷ್ಟಪಡಿಸಿದ್ದಾರೆ. "ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ," ಎಂದು ಅವರು ಹೇಳಿದ್ದಾರೆ.

ರಾಮಲೀಲಾ ಮೈದಾನಗಳು, ದುರ್ಗಾಪೂಜಾ ಮೇಳಗಳು ಮತ್ತು ರಾವಣ ದಹನ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸುವಂತೆ ವಿಭಾಗೀಯ ಆಯುಕ್ತ ಭೂಪೇಂದ್ರ ಎಸ್. ಚೌಧರಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗುಪ್ತಚರ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ.

Read More
Next Story