ಪತಂಜಲಿಯ ಅಕ್ರಮಗಳಿಗೆ ಕಣ್ಣು ಮುಚ್ಚಿ ಕೂರಬೇಡಿ: ಕೇಂದ್ರಕ್ಕೆ ಸುಪ್ರೀಂ ಚಾಟಿ
ಕೂಡಲೇ ಪತಂಜಲಿ ಜಾಹೀರಾತು ಪ್ರಸಾರ ತಡೆಗೆ ಸುಪ್ರೀಂ ಕೋರ್ಟ್ ಸೂಚನೆ
ಪತಂಜಲಿ ಆಯುರ್ವೇದ ಸಂಸ್ಥೆಯ ತಪ್ಪು ಹಾಗೂ ಸುಳ್ಳು ಮಾಹಿತಿಯ ಮೇಲೆ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತಿದೆ.
ಪತಂಜಲಿ ಅಕ್ರಮಗಳಿಗೆ ಕಣ್ಣುಮುಚ್ಚಿ ಕೂರಬೇಡಿ ಎಂದು ಚಾಟಿ ಬೀಸಿದೆ.
ತಪ್ಪು ಹಾಗೂ ಸುಳ್ಳಿನಿಂದ ಕೂಡಿದ ಜಾಹೀರಾತುಗಳ ಮೂಲಕ ಇಡೀ ದೇಶವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಅತ್ಯಂತ ದುರದೃಷ್ಟಕರ.
ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಪೀಠವು ಸೂಚನೆ ನೀಡಿದೆ.
ದಾರಿತಪ್ಪಿಸುವ ಜಾಹೀರಾತು
ಯೋಗ ಗುರು ಬಾಬಾ ರಾಮ್‌ದೇವ್ ಅವರ ಸಹ-ಮಾಲೀಕತ್ವದ ಕಂಪನಿಯ ಎಲ್ಲ ಔಷಧಿಗಳ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಯಾವುದೇ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳನ್ನು ನೀಡದಂತೆ ಸೂಚಿಸಲಾಗಿದೆ.
ಪತಂಜಲಿ ಆಯುರ್ವೇದದ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ಪ್ರಕಟವಾಗಿದ್ದರ ಬಗ್ಗೆ ಕಳೆದ ವರ್ಷ ನವೆಂಬರ್‌ನಲ್ಲೇ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು.
ಐಎಂಎ ದೂರು
ಜಾಹೀರಾತುಗಳಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಅಲೋಪತಿ ಮತ್ತು ವೈದ್ಯರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ.
ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಅವಹೇಳನಕಾರಿ ಹೇಳಿಕೆಗಳನ್ನು ನೀಡಿವೆ ಎಂದು ಐಎಂಎ ದೂರಿತ್ತು.
ಆಧುನಿಕ ಔಷಧಗಳನ್ನು ಸೇವಿಸಿದರೂ ವೈದ್ಯಾಧಿಕಾರಿಗಳೇ ಸಾಯುತ್ತಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ ಎಂದು ಐಎಂಎ ವಕೀಲರು ವಾದಿಸಿದ್ದರು.