Trump: US stopped India-Pakistan
x

ಡೊನಾಲ್ಡ್​ ಟ್ರಂಪ್​

ಭಾರತ-ಪಾಕ್ ಮಧ್ಯೆ ಶಾಂತಿ ಸ್ಥಾಪಿಸಿದ್ದು ನಾನೇ; ಐದನೇ ಬಾರಿ ಹೇಳಿದ ಡೊನಾಲ್ಡ್ ಟ್ರಂಪ್​!

"ಭಾರತ ಹಾಗೂ ಪಾಕಿಸ್ತಾನವನ್ನು ಶಾಂತಿಯತ್ತ ಕೊಂಡೊಯ್ಯಲು ಹಾಗೂ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಮನವೊಲಿಸಿದ್ದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.


ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ಅಮೆರಿಕ ಮಹತ್ವದ ಪಾತ್ರ ವಹಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.

"ಎರಡು ರಾಷ್ಟ್ರಗಳನ್ನು ಶಾಂತಿಯತ್ತ ಕೊಂಡೊಯ್ಯಲು ಹಾಗೂ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಮನವೊಲಿಸಿದ್ದೆ" ಎಂದು ಹೇಳಿಕೆ ನೀಡಿದ್ದಾರೆ.

ಮೇ 13 ರಂದು ಸೌದಿ ಅರೇಬಿಯಾ ಭೇಟಿಯ ಬಳಿಕ ಏರ್ ಫೋರ್ಸ್ ಒನ್ ವಿಮಾನದಿಂದಲೇ 'ಫಾಕ್ಸ್ ನ್ಯೂಸ್‌''ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇದು ಕಳೆದ ಐದು ದಿನಗಳಲ್ಲಿ ಇದು ಐದನೇ ಬಾರಿಗೆ ಟ್ರಂಪ್ ಅವರು ಭಾರತ-ಪಾಕ್ ಸಂಘರ್ಷದಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಬಗ್ಗೆ ಮಾತನಾಡಿರುವುದು.

ಭಾರತ ಮತ್ತು ಪಾಕಿಸ್ತಾನವು ಇತ್ತೀಚೆಗೆ ನಾಲ್ಕು ದಿನಗಳ ಕಾಲ ನಡೆದ ಗಡಿಯಾಚೆಗಿನ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ನಂತರ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ. ಈ ಕುರಿತು ಭಾರತ ಸರ್ಕಾರ ಸ್ಪಷ್ಟನೆ ನೀಡಿದ್ದು, ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಗುಂಡಿನ ದಾಳಿ ಹಾಗೂ ಸೇನಾ ಕಾರ್ಯಾಚರಣೆಗಳನ್ನು ತಕ್ಷಣದಿಂದಲೇ ನಿಲ್ಲಿಸಲು ನಿರ್ಧರಿಸಿದ್ದು, ಈ ಪ್ರಕ್ರಿಯೆಯಲ್ಲಿ ಮೂರನೇ ವ್ಯಕ್ತಿಯ ಅಥವಾ ದೇಶದ ಹಸ್ತಕ್ಷೇಪ ಇರಲಿಲ್ಲ ಎಂದು ಹೇಳಿತ್ತು. ಆದರೆ, ಟ್ರಂಪ್ ಅದರ ಶ್ರೇಯಸ್ಸು ಪಡೆಯಲು ನಿರಂತರವಾಗಿ ಯತ್ನಿಸುತ್ತಿದ್ದಾರೆ.

ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಈ ಎರಡೂ ರಾಷ್ಟ್ರಗಳು ಪರಮಾಣು ಶಕ್ತಿ ಹೊಂದಿದ್ದು, ಸಂಘರ್ಷ ಮುಂದುವರೆದಿದ್ದರೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ನಾವು ಮಧ್ಯಸ್ಥಿಕೆ ವಹಿಸಿ ಉತ್ತಮ ಕೆಲಸ ಮಾಡಿದ್ದೇವೆ. ನನ್ನ ತಂಡದ ಸದಸ್ಯರಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇದರಲ್ಲಿ ತೊಡಗಿಸಿದ್ದರು" ಎಂದು ಟ್ರಂಪ್ ವಿವರಿಸಿದ್ದಾರೆ.

ಇದಕ್ಕೂ ಮುನ್ನ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಸೌದಿ-ಯುಎಸ್ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ್ದ ಟ್ರಂಪ್, "ನಾನು ಯುದ್ಧವನ್ನು ಇಷ್ಟಪಡುವುದಿಲ್ಲ, ಶಾಂತಿ ಸ್ಥಾಪಕನಾಗಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ ನನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಲು ಐತಿಹಾಸಿಕ ಒಪ್ಪಂದ ಮಾಡಿತು. ಇದರಲ್ಲಿ ವ್ಯಾಪಾರವನ್ನು ಒಂದು ಪ್ರಮುಖ ಸಾಧನವಾಗಿ ಬಳಸಿದೆವು" ಎಂದಿದ್ದರು.

ಟ್ರಂಪ್ ಅವರು ಈ ಹಿಂದೆ ಕಾಶ್ಮೀರ ವಿಷಯದಲ್ಲೂ ಮಧ್ಯಸ್ಥಿಕೆ ವಹಿಸುವ ಆಫರ್ ನೀಡಿದ್ದರು. ಆದರೆ ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಷಯವಾಗಿದ್ದು, ಇದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.

Read More
Next Story