
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಬಳಿ ಎಷ್ಟು ಆಸ್ತಿ ಇದೆ ಗೊತ್ತೇ? ಇಲ್ಲಿದೆ ಎಲ್ಲ ವಿವರ
ನ್ಯಾಯಾಲಯಕ್ಕೆ ನೀಡಿದ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್ ನಿರ್ಧಾರ ಕೈಗೊಂಡಿತ್ತು. ಇದೀಗ 22 ನ್ಯಾಯಾಧೀಶರು ಆಸ್ತಿ ವಿವರಗಳನ್ನು ಪ್ರಕಟಿಸಿದ್ದಾರೆ.
ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ನ್ಯಾಯಮೂರ್ತಿಗಳ ಆಸ್ತಿಗಳ ವಿವರ ಬಹಿರಂಗಗೊಳಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿದಂತೆ ಇತರೆ ನ್ಯಾಯಮೂರ್ತಿಗಳ ಬಳಿ ಎಷ್ಟು ಆಸ್ತಿ ಇದೆ ಎಂಬುದು ಸಾರ್ವಜನಕರಿಗೆ ಗೊತ್ತಾಗಿದೆ. ಇದರೊಂದಿಗೆ, ನ್ಯಾಯಮೂರ್ತಿಗಳ ಆಸ್ತಿ ಎಷ್ಟಿರಬಹುದು ಹಾಗೂ ಅವರ ಆದಾಯದ ಮೂಲಗಳ ಕುರಿತಾದ ಸಾರ್ವಜನಿಕರ ಕುತೂಹಲಕ್ಕೆ ತೆರೆ ಬಿದ್ದಿದೆ.
ಮೇ 13ರಂದು ನಿವೃತ್ತರಾಗಲಿರುವ ಸಿಜೆಐ ಸಂಜೀವ್ ಖನ್ನಾ ಅವರು ಗುರುಗ್ರಾಮ್‌ನ ಸೆಕ್ಟರ್ 49ರಲ್ಲಿ ನಾಲ್ಕು ಕೋಣೆಗಳ ಪ್ಲಾಟ್‌ನ ಶೇ.56 ಷೇರುಗಳನ್ನು ಹೊಂದಿದ್ದು, ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ 2016 ಚದರ ಅಡಿ ಜಾಗ, ಮನೆಯನ್ನು ಹೊಂದಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ 1,06,86,000 ರೂಪಾಯಿ ಹೂಡಿಕೆ ಮಾಡಿದ್ದು, 1,77,89,000 ಜಿಪಿಎಫ್, 29,695 ಎಲ್‌ಐಸಿ ಮನಿ ಬ್ಯಾಂಕ್ ಪಾಲಿಸಿ ಪ್ರಿಮಿಯರ್ ಹಾಗೂ 14,000 ಮೌಲ್ಯದ ಷೇರು, ಚರಾಸ್ಥಿಗಳ ಪೈಕಿ 250 ಗ್ರಾಂ ಚಿನ್ನ, ಎರಡು ಕೆ.ಜಿ. ಬೆಳ್ಳಿ ಹಾಗೂ 2015 ರಲ್ಲಿ ಉಡುಗೊರೆಯಾಗಿ ನೀಡಿದ ಮಾರುತಿ ಸ್ವಿಪ್ಟ್ ಕಾರು ಹೊಂದಿದ್ದಾರೆ.
ನಿಯೋಜಿತ ಸಿಜೆಐ ಬಿ.ಆರ್. ಗವಾಯಿ ಮೇ14ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 6,59,692 ರೂಪಾಯಿ ಪಿಪಿಎಫ್, 35,86,736 ರೂಪಾಯಿ ಜಿಪಿಎಫ್, 5,25,859 ರೂಪಾಯಿ ಮೌಲ್ಯದ ಬಂಗಾರ ಹಾಗೂ 19,63,584 ರೂಪಾಯಿ ಬ್ಯಾಂಕ್ ಉಳಿತಾಯ ಹೊಂದಿದ್ದಾರೆ. ಹೆಂಡತಿ ಹೆಸರಿನಲ್ಲಿ 29.70 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ 61,320 ರೂಪಾಯಿ ಠೇವಣಿ ಹೊಂದಿದ್ದಾರೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿತ್ರಾರ್ಜಿತ ಮನೆ, ಬಾಂದ್ರಾ ಹಾಗೂ ದೆಹಲಿಯಲ್ಲಿ ಅಪಾರ್ಟ್‌ಮೆಂಟ್‌ಗಳು, ನಾಗ್ಪುರ ಮತ್ತು ಅಮರಾವತಿಯಲ್ಲಿ ಕೃಷಿ ಜಮೀನು ಹೊಂದಿದ್ದಾರೆ.
ನ್ಯಾಯಲಯಕ್ಕೆ ನೀಡಿದ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಏಪ್ರಿಲ್ 1ರಂದು ಸುಪ್ರೀಂ ನಿರ್ಧಾರ ಕೈಗೊಂಡಿತ್ತು. ಸುಪ್ರೀಂ ಕೋರ್ಟ್‌ನ 33 ನ್ಯಾಯಮೂರ್ತಿಗಳ ಪೈಕಿ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನಿಯೋಜಿತ ಸಿಜೆಐ ಬಿ.ಆರ್. ಗವಾಯಿ ಅವರು ಸೇರಿದಂತೆ ಒಟ್ಟು 21 ನ್ಯಾಯಾಧೀಶರು ಆಸ್ತಿವಿವರ ಸಲ್ಲಿಸಿದ್ದಾರೆ. ಉಳಿದ ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಶೀಘ್ರವೇ ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಆಸ್ತಿ ವಿವರ ಬಹಿರಂಗವಾಗಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ತರುವಲ್ಲಿ ಮಹತ್ವದ ನಿರ್ಧಾರವಾಗಿದೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನೋಟುಗಳ ಕಂತೆ ಸಿಕ್ಕಿದ್ದ ನಂತರ ಎಲ್ಲಾ ನ್ಯಾಯಮೂರ್ತಿಗಳ ಆಸ್ತಿವಿವರ ಬಹಿರಂಗಕ್ಕೆ ನ್ಯಾಯಾಲಯ ಸೂಚಿಸಿತ್ತು.