ದೆಹಲಿ ಸ್ಫೋಟ|ಭಯೋತ್ಪಾದಕ ಡಾ.ಉಮರ್ ಉನ್ ನಬಿ ಸೂತ್ರಧಾರ; ಡಿಎನ್‌ಎ ಪರೀಕ್ಷೆಯಲ್ಲಿ ದೃಢ
x

ದೆಹಲಿ ಸ್ಪೋಟ

ದೆಹಲಿ ಸ್ಫೋಟ|ಭಯೋತ್ಪಾದಕ ಡಾ.ಉಮರ್ ಉನ್ ನಬಿ ಸೂತ್ರಧಾರ; ಡಿಎನ್‌ಎ ಪರೀಕ್ಷೆಯಲ್ಲಿ ದೃಢ

ಉಮರ್‌ನ ತಾಯಿಯ ಡಿಎನ್‌ಎ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸ್ಫೋಟ ಸ್ಥಳದಿಂದ ಸಂಗ್ರಹಿಸಲಾದ ಮಾನವ ಅವಶೇಷಗಳೊಂದಿಗೆ ಈ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.


Click the Play button to hear this message in audio format

ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಕಾಶ್ಮೀರದ ವೈದ್ಯ ಡಾ.ಉಮರ್ ಉನ್ ನಬಿ ಕಾರಣ ಎಂಬುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ.

ಸ್ಫೋಟದಲ್ಲಿ ಆತನ ದೇಹವು ಛಿದ್ರವಾಗಿದ್ದರಿಂದ ಈವರೆಗೆ ಆತನ ಗುರುತು ಖಚಿತವಾಗಿರಲಿಲ್ಲ.

ಉಮರ್‌ನ ತಾಯಿಯ ಡಿಎನ್‌ಎ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸ್ಫೋಟ ಸ್ಥಳದಿಂದ ಸಂಗ್ರಹಿಸಲಾದ ಮಾನವ ಅವಶೇಷಗಳೊಂದಿಗೆ ಈ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಡಿಎನ್‌ಎ ಫಲಿತಾಂಶಗಳು ವಾಹನ ಚಲಾಯಿಸುತ್ತಿದ್ದದ್ದು ಉಮರ್ ಉನ್ ನಬಿ ಎಂದು ಖಚಿತಪಡಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಮರ್ ಇತ್ತೀಚೆಗೆ ಪತ್ತೆಯಾದ ವೈಟ್ ಕಾಲರ್ ಭಯೋತ್ಪಾದಕ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದವನು. ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಟ 12ಜನರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದರು.

ಫರಿದಾಬಾದ್ ಮೂಲಕ ಭಯೋತ್ಪಾದಕರ ಜಾಡು

ತನಿಖಾಧಿಕಾರಿಗಳು ಮೊದಲಿಗೆ ಡಾ. ಉಮರ್‌ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಏಕೆಂದರೆ ಆತ ಸ್ಫೋಟಕ್ಕೆ ಕೇವಲ 11 ದಿನಗಳ ಮೊದಲು ದಾಳಿಗೆ ಬಳಸಲಾದ ಬಿಳಿ ಹ್ಯುಂಡೈ i20 ಕಾರನ್ನು ಖರೀದಿಸಿದ್ದ. ಪುಲ್ವಾಮಾದಲ್ಲಿ ಆತನ ಕುಟುಂಬದಿಂದ ಪಡೆದ ಡಿಎನ್‌ಎ ಮಾದರಿಗಳು, ಕಾರಿನಿಂದ ವಶಪಡಿಸಿಕೊಂಡ ಅವಶೇಷಗಳಿಗೆ ಹೊಂದಿಕೆಯಾಗಿದ್ದು, ಸ್ಫೋಟದ ಸಮಯದಲ್ಲಿ ಆತ ಕಾರಿನ ಹಿಂದೆ ಕುಳಿತಿದ್ದ ಎಂದು ದೃಢಪಟ್ಟಿದೆ.

ಉಮರ್ ಫರಿದಾಬಾದ್, ಲಕ್ನೋ ಮತ್ತು ದಕ್ಷಿಣ ಕಾಶ್ಮೀರದ ನಡುವೆ ಕಾರ್ಯನಿರ್ವಹಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಲಾಜಿಸ್ಟಿಕ್ಸ್ ಸಂಘಟನೆಗೆ ಸೇರಿದ್ದ. ಈ ಗುಂಪಿನಲ್ಲಿ ಐದರಿಂದ ಆರು ವೈದ್ಯರು ಸೇರಿದಂತೆ ಒಂಬತ್ತರಿಂದ ಹತ್ತು ಸದಸ್ಯರಿದ್ದು, ಅವರು ತಮ್ಮ ವೈದ್ಯಕೀಯ ಅರ್ಹತೆಗಳನ್ನು ದುರುಪಯೋಗಪಡಿಸಿಕೊಂಡು ರಾಸಾಯನಿಕಗಳು ಮತ್ತು ಸ್ಫೋಟಕಗಳಿಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ನವೆಂಬರ್ 9 ರಿಂದ ಉಮರ್ ನಾಪತ್ತೆಯಾಗಿದ್ದ. ದಾಳಿಯ ಹಿಂದಿನ ದಿನ ಫರಿದಾಬಾದ್‌ನ ಗೋದಾಮಿನಿಂದ ಸುಮಾರು 2,900 ಕೆಜಿ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿತ್ತು. ಅಕ್ಟೋಬರ್ 30 ರಿಂದ ತಮ್ಮ ಐದು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿರುವ ಉಮರ್, ಧೌಜ್ ಗ್ರಾಮದ ಬಳಿ ಭೂಗತರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ಪೊಲೀಸರು, ಫರಿದಾಬಾದ್‌ನಲ್ಲಿ ಮಾಜಿ ಉಪನ್ಯಾಸಕಿ ಡಾ. ಶಾಹೀನ್ ಶಾಹಿದ್ ಅವನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಕೆ ಜಮಾತ್-ಉಲ್-ಮೊಮಿನೀನ್ ಸಂಘಟನೆಯಡಿ ಭಾರತದಲ್ಲಿ ಜೆಇಎಂನ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಜಾಲದಲ್ಲಿನ ಪಾತ್ರಗಳ ಕುರಿತು ವಿಚಾರಣೆಗಾಗಿ ಡಾ. ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಡಾ. ತಜಮುಲ್ ಅಹ್ಮದ್ ಮಲಿಕ್ ಅವರನ್ನೂ ಬಂಧಿಸಲಾಗಿದೆ. ಮೂವರು ವೈದ್ಯರನ್ನು ತೀವ್ರಗಾಮಿಯನ್ನಾಗಿ ಮಾಡಿದನೆಂದು ಹೇಳಲಾದ ಮೌಲ್ವಿ ಇರ್ಫಾನ್ ಬಂಧನದ ಬಳಿಕ ದಕ್ಷಿಣ ಕಾಶ್ಮೀರದಾದ್ಯಂತ ಜಮಾತ್-ಇ-ಇಸ್ಲಾಮಿ ಕಾರ್ಯಕರ್ತರ ಮನೆಗಳ ಮೇಲೆ ದಾಳಿಗಳು ನಡೆದಿವೆ.

ಕೆಂಪುಕೋಟೆ ಗುರಿ

ಈ ವೈಟ್-ಕಾಲರ್ ಭಯೋತ್ಪಾದಕ ಸಂಘಟನೆ ಪ್ರಮುಖ ಸದಸ್ಯರು ಈ ವರ್ಷದ ಗಣರಾಜ್ಯೋತ್ಸವದಂದು ಕೆಂಪು ಕೋಟೆಯನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ಪ್ರಮುಖ ಸ್ಥಾಪನೆಗಳನ್ನು ಗುರಿಯಾಗಿಸುವ ದೊಡ್ಡ ಪಿತೂರಿಯ ಭಾಗವಾಗಿ ಸ್ಮಾರಕದ ಸುತ್ತಲಿನ ಪ್ರದೇಶಗಳನ್ನು ಗಮನಿಸಿದ್ದರು.

ಡಾ. ಉಮರ್ ನಬಿ ಮತ್ತು ಬಂಧಿತ ಡಾ. ಮುಜಮ್ಮಿಲ್ ಗನೈ ಇಬ್ಬರೂ ಟರ್ಕಿಗೆ ಪ್ರಯಾಣ ಬೆಳೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲಿ ಅವರಿಗೆ ನಿರ್ವಾಹಕರು ಸಂಪರ್ಕದಲ್ಲಿದ್ದರು. ನಬಿ ಮತ್ತು ಗನೈ ಅವರ ಪಾಸ್‌ಪೋರ್ಟ್‌ಗಳು, ಕೆಲವು ಟೆಲಿಗ್ರಾಂ ಗುಂಪುಗಳನ್ನು ಸೇರಿದ ಬಳಿಕ ಟರ್ಕಿಗೆ ಪ್ರಯಾಣ ಮಾಡಿದ್ದನ್ನು ತೋರಿಸುತ್ತವೆ. ಟರ್ಕಿ ಭೇಟಿಯ ನಂತರ ಗುರಿ ಸ್ಥಳಗಳನ್ನು ಆಯ್ಕೆ ಮಾಡಲು ಮತ್ತು ಭಾರತದಾದ್ಯಂತ ತಮ್ಮ ಜಾಲವನ್ನು ಹರಡಲು ಹ್ಯಾಂಡ್ಲರ್ ವೈದ್ಯರ ಗುಂಪಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ದೀಪಾವಳಿ ಸಮಯದಲ್ಲಿ ಜನದಟ್ಟಣೆಯ ಪ್ರದೇಶಗಳನ್ನು ಗುರಿಯಾಗಿಸಲು ಬಯಸಿದ್ದರು, ಆದರೆ ವಿಫಲರಾಗಿದ್ದರು. ಈ ವೈದ್ಯರ ಸಂಘಟನೆ ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಕಾರ್ಯಕರ್ತ ಉಮರ್ ಬಿನ್ ಖಟ್ಟಾಬ್ ನಡೆಸುತ್ತಿರುವ ಗುಂಪು ಸೇರಿದಂತೆ ಎರಡು ಟೆಲಿಗ್ರಾಮ್ ಗುಂಪುಗಳ ಮೂಲಕ ಮೂಲಭೂತವಾದಕ್ಕೆ ಒಳಗಾಗಿತ್ತು. 2008ರ 26/11 ಮುಂಬೈ ದಾಳಿಯ ಮಾದರಿಯಲ್ಲೇ ದಾಳಿ ನಡೆಸಲು ಶಂಕಿತರು ಉದ್ದೇಶಿಸಿದ್ದರು ಎಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

Read More
Next Story