ಧನಕರ್ ರಾಜೀನಾಮೆ ತಂದ ಆಘಾತ: ಇನ್ನೊಂದು ಸವಾಲಿನ ಹಣಾಹಣಿಗೆ ಸಿದ್ಧವಾದ ಎನ್‌ಡಿಎ, ಇಂಡಿಯಾ ಒಕ್ಕೂಟ
x

ಧನಕರ್ ರಾಜೀನಾಮೆ ತಂದ ಆಘಾತ: ಇನ್ನೊಂದು ಸವಾಲಿನ ಹಣಾಹಣಿಗೆ ಸಿದ್ಧವಾದ ಎನ್‌ಡಿಎ, ಇಂಡಿಯಾ ಒಕ್ಕೂಟ

ಧನಕರ್ ಅವರ ದಿಢೀರ್ ರಾಜೀನಾಮೆ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಚುನಾವಣಾ ಆಯೋಗ ಧನಕರ್ ಉತ್ತರಾಧಿಕಾರಿ ಆಯ್ಕೆಗೆ ಪ್ರಕ್ರಿಯೆ ಶುರುಹಚ್ಚಿಕೊಂಡಿರುವ ಬೆನ್ನಲ್ಲೇ ಎರಡೂ ರಾಜಕೀಯ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.


ಜುಲೈ 21ರ ಸೋಮವಾರ ತಡರಾತ್ರಿ ಜಗದೀಪ್ ಧನಕರ್ ಅವರು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ ಕೇವಲ 48 ಗಂಟೆಗಳ ಒಳಗೆ ಚುನಾವಣಾ ಆಯೋಗ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಪ್ರಕ್ರಿಯೆ ಶುರುಹಚ್ಚಿಕೊಂಡಿದೆ.

ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು. ಆದರೆ ಧನಕರ್ ಅವರ ರಾಜೀನಾಮೆಯಿಂದ ದಿಢೀರ್ ಎಂದು ಉದ್ಭವಿಸಿದ ಅನಿರೀಕ್ಷಿತ ರಾಜಕೀಯ ಪರಿಸ್ಥಿತಿ ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್.ಡಿ.ಎ. ಮೈತ್ರಿಕೂಟ ಮತ್ತು ವಿರೋಧ ಪಕ್ಷವಾದ INDIA ಬಣಕ್ಕೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ ಎಂಬುದು ಮಾತ್ರ ದಿಟ.

ಸಂಸತ್ತಿನ ಮುಂಗಾರು ಅಧಿವೇಶನದ ನಡುವೆಯೇ ಚುನಾವಣೆಗೆ ಎರಡೂ ಕಡೆಯ ರಾಜಕೀಯ ಪಾಳಯದಿಂದ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಿನ ವಾರದಿಂದಲೇ ಆರಂಭಿಸಲಿವೆ ಎಂದು ಉನ್ನತ ಮಟ್ಟದ ರಾಜಕೀಯ ಮೂಲಗಳು ದ ಫೆಡರಲ್ ಗೆ ದೃಢಪಡಿಸಿವೆ.

ಬ್ರಿಟನ್ ಮತ್ತು ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ದೆಹಲಿಗೆ ಮರಳಲಿದ್ದಾರೆ. ಆ ಬಳಿಕ ಸಂಭಾವ್ಯ ಅಭ್ಯರ್ಥಿಗಳ ಚರ್ಚೆ ನಡೆಸಲಾಗುತ್ತದೆ ಎಂದು ಆಢಳಿತಾರೂಢ ಮೈತ್ರಿಕೂಟದ ಮೂಲಗಳು ಹೇಳಿವೆ.

ಜುಲೈ 28 ಮತ್ತು 29ರಂದು ನಿಗದಿಯಾಗಿರುವ ಆಪರೇಶನ್ ಸಿಂದೂರ್ ಗೆ ಸಂಬಂಧಿಸಿದ ಚರ್ಚೆಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಇದೇ ಹೊತ್ತಿನಲ್ಲಿ ಧನಕರ್ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಮೋದಿ ಅವರ ಮಧ್ಯಪ್ರವೇಶ, ಬಿಜೆಪಿಯ ಉನ್ನತಮಟ್ಟದ ನಾಯಕರ ನಡುವೆ ಚರ್ಚೆ ಕೈಗೊಳ್ಳುವ ನಿರೀಕ್ಷೆಯಿದೆ.

ಇದೇ ಹೊತ್ತಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಇನ್ನೂ ಕೆಲವು ಸಚಿವರು ಮಿತ್ರಪಕ್ಷಗಳ ನಾಯಕರ ಜೊತೆಗೆ, ಅದರಲ್ಲೂ ಮುಖ್ಯವಾಗಿ ನಿತೀಶ್ ಕುಮಾರ್ (ಜೆಡಿಯು) ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಅವರೊಂದಿಗೆ ಧನಕರ್ ರಾಜೀನಾಮೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ.

ಬಿಜೆಪಿ ನಾಯಕತ್ವವು ಉಪರಾಷ್ಟ್ರಪತಿ ಚುನಾವಣೆಗೆ ಪಕ್ಷದಿಂದಲೇ ಒಬ್ಬರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಒಬ್ಬ ಹಿರಿಯ ಸಚಿವರು ದ ಫೆಡರಲ್.ಗೆ ತಿಳಿಸಿದ್ದಾರೆ. ಹಾಗಿದ್ದೂ ಮೋದಿ ಅವರು ‘ನಮ್ಮ ಮಿತ್ರಪಕ್ಷಗಳ ನಾಮನಿರ್ದೇಶನ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅವರು ಹೇಳುತ್ತಾರೆ.

ಸಹಮತಕ್ಕೆ ಪ್ರಯತ್ನ: ಮಿತ್ರ ಪಕ್ಷಗಳು ಉಪರಾಷ್ಟ್ರಪತಿ ಹುದ್ದೆಗೆ ಗಂಭೀರವಾಗಿ ಪ್ರಯತ್ನ ಮಾಡದೇ ಇದ್ದರೆ ಪಕ್ಷವು ಎನ್.ಡಿ.ಎ ಒಳಗೆ ಸಹಮತ ಮೂಡಿಸಲು ಪ್ರಯತ್ನ ನಡೆಸಲಿದೆ. ಮಿತ್ರ ಪಕ್ಷಗಳು ಇದಕ್ಕಾಗಿ ಹಕ್ಕು ಚಲಾಯಿಸುವ ಸಾಧ್ಯತೆ ತುಂಬಾ ಕಡಿಮೆ. ಪ್ರಧಾನಿ ಮರಳಿದ ಬಳಿಕ ನಡೆಯಬಹುದಾದ ಮಾತುಕತೆಗೆ ಇನ್ನಷ್ಟು ಸ್ಪಷ್ಟತೆ ಮೂಡಲಿದೆ ಎಂದು ಅವರು ವಿವರಿಸಿದರು.

ದ ಫೆಡರಲ್ ಜೊತೆ ಮಾತನಾಡಿದ ಅನೇಕ ಮಂದಿ ಸಂಸದರು ಕೂಡ ಸರ್ಕಾರವು ರಾಜಕೀಯ ಕ್ಷೇತ್ರವನ್ನು ಬಿಟ್ಟು ಹೊರಗಿನಿಂದ, ಅಂದರೆ ನ್ಯಾಯಾಂಗ ಅಥವಾ ಕಾರ್ಯಾಂಗ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದು ತೀರಾ ಕಡಿಮೆ ಎಂದು ಹೇಳಿದ್ದಾರೆ.

ಹಿಂದಿನ ಧನಕರ್ ಮತ್ತು ಎಂ.ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಿದ ಸಂದರ್ಭಕ್ಕೆ ಹೋಲಿಸಿದರೆ ಈಗ ಉಪರಾಷ್ಟ್ರಪತಿ ಚುನಾವಣೆಯ ಸುತ್ತ ಇರುವ ಪರಿಸ್ಥಿತಿ ಸಂಪೂರ್ಣ ಭಿನ್ನ ಎಂಬ ಅಭಿಪ್ರಾಯವನ್ನು ಕನಿಷ್ಠ ಮೂರು ಮಂದಿ ಬಿಜೆಪಿ ಹಿರಿಯ ಸಂಸದರು ವ್ಯಕ್ತಪಡಿಸಿದ್ದಾರೆ.

ಮಿತ್ರರಿಗಿಲ್ಲ ಅವಕಾಶ?: “ಹಿಂದಿನ ಎರಡೂ ಚುನಾವಣೆಗಳ ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಬಿಜೆಪಿ ಇದ್ದ ಸ್ಥಿತಿ ಭಿನ್ನ. ಆಗ ಲೋಕಸಭೆಯಲ್ಲಿ ನಾವು ಹೊಂದಿದ್ದ ಸಂಖ್ಯಾಬಲದ ಆಧಾರದಲ್ಲಿ ನಮ್ಮನ್ನು ಯಾರೂ ಸವಾಲಿಗೊಡ್ಡಲು ಸಾಧ್ಯವಿರಲಿಲ್ಲ. ಪ್ರಧಾನಿ ಅವರ ರಾಜಕೀಯ ಜನಪ್ರಿಯತೆ ಕೂಡ ಉತ್ತುಂಗದಲ್ಲಿತ್ತು. ಯಾರು ಆ ಹುದ್ದೆಯಲ್ಲಿರಬೇಕು ಎಂಬುದನ್ನು ನಾವು ನಮ್ಮ ಮಿತ್ರಪಕ್ಷಗಳಿಗೆ ನಿರ್ದೇಶನ ನೀಡುವ ಸ್ಥಿತಿಯಲ್ಲಿ ನಾವಿದ್ದೆವು ಮತ್ತು ಮಿತ್ರ ಪಕ್ಷಗಳಿಗೆ ಒಪ್ಪಿಕೊಳ್ಳದೇ ಬೇರೆ ವಿಧಿ ಇರಲಿಲ್ಲ. 2024ರ ಬಳಿಕವೂ ಪ್ರಧಾನಿಯವರ ರಾಜಕೀಯ ಜನಪ್ರಿಯತೆಗೆ ಕುಂದಾಗದಿದ್ದರೂ ಲೋಕಸಭೆಯಲ್ಲಿ ಬಿಜೆಪಿಯ ಬಲ ಕಡಿಮೆಯಾಗಿರುವ ಕಾರಣ ನಮ್ಮ ಮಿತ್ರಪಕ್ಷಗಳಿಂದ ಬರುವ ಸಲಹೆಗಳನ್ನು ಅವರು ಪರಿಗಣಿಸುವ ಸಾಧ್ಯತೆ ಇದೆ. ಅಂತಿಮವಾಗಿ ಬಿಜೆಪಿಯಿಂದಲೇ ಯಾರಾದರೊಬ್ಬರನ್ನು ಅವರು ಅಭ್ಯರ್ಥಿಯನ್ನಾಗಿ ಮಾಡುವುದು ಖಚಿತ. ಹಾಗೆ ಆಗುತ್ತದೆ ಕೂಡ. ಆದರೂ ಮಿತ್ರಪಕ್ಷಗಳ ಮಾತಿಗೂ ಬೆಲೆ ಇದೆ ಎಂಬುದನ್ನು ಖಾತರಿಪಡಿಸುವುದು ಅವರ ಯೋಚನೆಯಾಗಿದೆ” ಎಂದು ಉತ್ತರ ಪ್ರದೇಶದ ಬಿಜೆಪಿಯ ಹಿರಿಯ ಸಂಸದರು ಹೇಳಿದ್ದಾರೆ.

ಈ ನಡುವೆ ಬಿಜೆಪಿ ಅಧ್ಯಕ್ಷರ ನೇಮಕ ಕಳೆದ ಜನವರಿ ತಿಂಗಳಿಂದ ಕಗ್ಗಂಟಾಗಿ ಕುಳಿತಿದೆ. ಪಕ್ಷದ ನಾಯಕತ್ವ ಮತ್ತು ಸಂಘದ ನಡುವೆ ಸಹಮತ ಮೂಡದೇ ಇರುವುದೇ ಇದಕ್ಕೆ ಕಾರಣ. ಅಂತಹ ಕಾಲಘಟ್ಟದಲ್ಲಿಯೇ ಉಪರಾಷ್ಟ್ರಪತಿ ಚುನಾವಣೆಯೂ ಬಂದಿದೆ. ಹಾಗಾಗಿ ಮೋದಿ ಅವರು ಆರ್.ಎಸ್.ಎಸ್. ಜೊತೆಗೂ ಮಾತುಕತೆ ನಡೆಸಬೇಕಾದ ಜರೂರತ್ತಿದೆ ಎಂದು ಉತ್ತರ ಪ್ರದೇಶದವರೇ ಆದ ಇನ್ನೊಬ್ಬರು ಬಿಜೆಪಿ ಹೇಳುತ್ತಾರೆ.

ಸಂಪುಟದಲ್ಲೂ ಬದಲಾವಣೆ: ಇದೇ ಸಂದರ್ಭದಲ್ಲಿ ಕೇಂದ್ರ ಸಂಪುಟದಲ್ಲಿಯೂ ಬದಲಾವಣೆಯ ಸಾಧ್ಯತೆಗಳಿವೆ. ಜೊತೆಗೆ ಕೆಲವು ರಾಜ್ಯಪಾಲರ ನೇಮಕಾತಿಯೂ ನಡೆಯಲಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಅಖೈರುಗೊಳಿಸಲಾಗುತ್ತದೆ. ಸಂಘದಿಂದಾಗಲಿ ಅಥವಾ ಎನ್.ಡಿ.ಎ ಮಿತ್ರಕೂಟದಿಂದಾಗಲಿ ಯಾರೊಬ್ಬರೂ ದೂರದೇ ಇರುವ ರೀತಿಯಲ್ಲಿ ಮೋದಿ ಈ ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಈ ವರ್ಷದ ಅಕ್ಟೋಬರ್-ನವೆಂಬರ್ ಹೊತ್ತಿಗೆ ಅತ್ಯಂತ ನಿರ್ಣಾಯಕವಾದ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಜೊತೆಗೆ 2026ರ ಆರಂಭದಲ್ಲಿಯೇ ಇನ್ನೂ ಅರ್ಧ ಡಜನ್ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಉಪರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಇವೆಲ್ಲವೂ ಮೋದಿ ಅವರ ಗಮನದಲ್ಲಿರುತ್ತದೆ.

2022ರ ಆಗಸ್ಟ್ ತಿಂಗಳಲ್ಲಿ ಉಪರಾಷ್ಟ್ರಪತಿ ಚುನಾವಣೆ ನಡೆದಾಗ ಧನಕರ್ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು 346 ಮತಗಳಿಂದ ಸೋಲಿಸಿದ್ದರು. 710 ಅರ್ಹ ಮತಗಳ ಪೈಕಿ ಧನಕರ್ ಅವರಿಗೆ 528 ಮತಗಳು ಸಿಕ್ಕಿದ್ದವು. ಆಳ್ವ ಅವರಿಗೆ 182 ಮತಗಳು ಲಭಿಸಿದ್ದವು. ಈ ಬಾರಿ ಅಷ್ಟು ಭರ್ಜರಿಯಾದ ಗೆಲುವು ಸಿಗಲಾರದು ಎಂಬುದು ಬಿಜೆಪಿಗೂ ಅರಿವಿದೆ.

ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಿಂದ 780 ಮಂದಿ ಎಂಪಿಗಳಿದ್ದರು. ಅವರಲ್ಲಿ 55 ಮಂದಿ ಸಂಸದರು ಗೈರುಹಾಜರಾಗಿದ್ದರು ಮತ್ತು 15 ಮತಗಳು ಅಸಿಂಧು ಆಗಿದ್ದವು.

ಗೆಲುವಿನ ವಿಶ್ವಾಸ: 2025ರ ಚುನಾವಣೆಯಲ್ಲಿ ಇರುವ ಒಟ್ಟು ಮತದಾರರ ಸಂಖ್ಯೆ 782 ಸಂಸದರು. ಒಟ್ಟು 788 ಸಂಸದರ ಪೈಕಿ ಕೆಳಮನೆಯಲ್ಲಿ ಒಂದು ಮತ್ತು ಮೇಲ್ಮನೆಯಲ್ಲಿ ಐದು ಸ್ಥಾನಗಳು ಖಾಲಿ ಉಳಿದಿವೆ. ಇವುಗಳಲ್ಲಿ ಎನ್.ಡಿ.ಎ ಹಾಗೂ ರಾಜ್ಯಸಭೆಯಲ್ಲಿರುವ ನಾಮನಿರ್ದೇಶಿತ ಸಂಸದರನ್ನು ಒಳಗೊಂಡಂತೆ ಕೇಂದ್ರದ ಆಯ್ಕೆಯನ್ನು ಬೆಂಬಲಿಸಲು 421 ಸಂಸದರ ಬಲವನ್ನು ಹೊಂದಿದೆ. 2022ರ ಚುನಾವಣೆಯ ಸಂದರ್ಭದಲ್ಲಿ ಗೈರುಹಾಜರಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಒಳಗೊಂಡ ಇಂಡಿಯಾ ಕೂಟದ ಬಲ 311 ಸಂಸದರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ 391 ಮತಗಳನ್ನು ಗಳಿಸಬೇಕು. ಎನ್.ಡಿ.ಎ. ಕೂಟದ ಬಲ ಇದಕ್ಕಿಂತ ಹೆಚ್ಚೇ ಇರುವುದರಿಂದ ಗೆಲವು ಖಚಿತ. ಆದರೂ 2022ರ ಧನಕರ್ ಆಯ್ಕೆಗೆ ಹೋಲಿಸಿದರೆ 100ರಷ್ಟು ಮತಗಳು ಕಡಿಮೆ.

ಒಟ್ಟು ಮತದಾರರನ್ನು ಗಮನಿಸಿದರೆ ಎನ್.ಡಿ.ಎ ತೀರಾ ಕಡಿಮೆ ಎಂದರೆ 30 ಮತಗಳ ಅಂತರವನ್ನು ಹೊಂದಿದೆ. ಅಂದರೆ ಜೆಡಿಯು ಮತ್ತು ಟಿಡಿಪಿಯ ಒಟ್ಟು ಬಲ 34 ಮತಗಳನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ. ಹಾಗಾಗಿ ಮೋದಿ ಅವರು ಮಿತ್ರಕೂಟದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸುವುದು ಅನಿವಾರ್ಯ.

ಸದ್ಯ ಇರುವ ಮತದಾರರ ಸಂಖ್ಯೆ ಇಂಡಿಯಾ ಬಣಕ್ಕೆ ಅವಕಾಶವೂ ಹೌದು. ಸವಾಲೂ ಹೌದು. ಸದ್ಯ ಅದರ ಬಗಲಲ್ಲಿರುವ 310 ಮತಗಳನ್ನು ಪರಿಗಣಿಸಿದರೆ ಜಯದ ಗಡಿಯನ್ನು ತಲುಪಲು ಅದಕ್ಕೆ ಬೇಕಿರುವುದು 80 ಮತಗಳು ಮಾತ್ರ.

ವಿರೋಧಪಕ್ಷಕ್ಕೆ ಸುವರ್ಣಾವಕಾಶ: ಒಂದು ವೇಳೆ ಇಂಡಿಯಾದ ಸಾಮೂಹಿಕ ನಾಯಕತ್ವವು ಸಂಘಟಿತರಾಗಿ, ಚತುರತೆಯಿಂದ ವರ್ತಿಸಿದರೆ ಮತ್ತು ಪರಿಸ್ಥಿತಿಯ ತುರ್ತನ್ನು ಪರಿಗಣಿಸಿ ಕಾರ್ಯನಿರ್ವಹಿಸಿದರೆ ಒಂದಷ್ಟು ಮುನ್ನಡೆಯನ್ನು ಸಾಧಿಸಲು ಸಾಧ್ಯವಿದೆ. ಅದಕ್ಕಾಗಿ ಕಳೆದ ಬಾರಿ ವಿರಳವಾಗಿದ್ದ ಮಿತ್ರರನ್ನು ಸೇರಿಸಿಕೊಳ್ಳಲು ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಅಂದರೆ ಬಿಜು ಪಟ್ನಾಯಕ್ ಅವರ ಬಿಜೆಡಿ, ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ವೈ.ಎಸ್.ಆರ್.ಸಿ.ಪಿ, ಅರವಿಂದ ಕೇಜ್ರಿವಾಲ್ ಅವರ ಆಪ್ (ಇಂಡಿಯಾ ಬಣದಲ್ಲಿಲ್ಲ), ಎಐಎಂಎಎಂನ ಅಸಾದುದ್ದೀನ್ ಓವೈಸಿ, ಆಜಾದ್ ಸಮಾಜ್ ಪಕ್ಷದ ಚಂದ್ರಶೇಖರ್ ಆಜಾದ್, ಬಿಆರ್.ಎಸ್.ನ ಕೆ.ಚಂದ್ರಶೇಖರ್ ಮತ್ತು ಬಿ.ಎಸ್.ಪಿಯ ಮಾಯಾವತಿ ಅವರ ಬೆಂಬಲವನ್ನು ಪಡೆದುಕೊಂಡು ಒಂದು ಸಂಯುಕ್ತ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದು. ಆಗ 80 ಮತಗಳ ಅಂತರವನ್ನು ಇನ್ನೂ ಅರ್ಧಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಅದರಿಂದ ಉಪರಾಷ್ಟ್ರಪತಿ ಹುದ್ದೆಯನ್ನು ಪಡೆಯಲು ಸಾಧ್ಯವಾಗದೇ ಹೋದರೂ ಮೋದಿ ಆಡಳಿತವನ್ನು ಮುಜುಗರಕ್ಕೆ ಗುರಿಪಡಿಸಬಹುದು ಮತ್ತು ಅನೇಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇನ್ನೂ ಒಗ್ಗೂಡಲು ಸಾಧ್ಯವಿದೆ ಎಂಬುದನ್ನು ಸಾಬೀತುಪಡಿಸಬಹುದು.

ಕಳೆದ ವಾರ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಸಾಮಾನ್ಯ ಕಾರ್ಯಸೂಚಿಯ ಬಗ್ಗೆ ಚರ್ಚಿಸಲು ಇಂಡಿಯಾ ಬಣದ ಪಕ್ಷಗಳ ಉನ್ನತ ಮಟ್ಟದ ನಾಯಕರು ಒಂದೆಡೆ ಸೇರಿದ್ದಾಗ, ದೇಶದ ಸಧ್ಯದ ರಾಜಕೀಯ ಸ್ಥಿತಿಯನ್ನು ಚರ್ಚಿಸಲು ಶೀಘ್ರದಲ್ಲಿಯೇ ಮತ್ತೊಮ್ಮೆ ಭೇಟಿಯಾಗಿ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದರು. ಈಗ ಧನಕರ್ ಅವರು ದಿಢೀರ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ವಿರೋಧಪಕ್ಷದ ಮಿತ್ರರು ಆಗಸ್ಟ್ ತಿಂಗಳಲ್ಲಿ ಸಂಸತ್ ಅಧಿವೇಶನಕ್ಕೆ ಸ್ವಾತಂತ್ರೋತ್ಸವ ಸಿದ್ಧತೆಗಾಗಿ ಐದು ದಿನಗಳ ವಿರಾಮವಿರುವ ಅವಧಿಯಲ್ಲಿ ಅಥವಾ ಮಳೆಗಾಲದ ಅಧಿವೇಶನ ಮುಕ್ತಾಯಗೊಂಡ (ಆ.21) ಬಳಿಕ ಸೇರುವ ಸಾಧ್ಯತೆಯಿದೆ ಎಂದು ದ ಫೆಡರಲ್ ಗೆ ಮೂಲಗಳು ತಿಳಿಸಿವೆ.

ಎನ್.ಡಿ.ಎ ನಡೆ ಕಡೆಗೆ ಗಮನ: ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದುಬಿಡಬಹುದು. ಹಾಗಾಗಿ ಎನ್.ಡಿ.ಎ. ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ತನಕ ವಿರೋಧಿ ಮಿತ್ರಕೂಟವು ಕಾಯಬಾರದು ಎಂಬುದು ಇಂಡಿಯಾದಲ್ಲಿರುವ ಒಂದು ಬಣದ ಅಭಿಪ್ರಾಯ. ಆದರೆ ಎನ್.ಡಿ.ಎ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ನೋಡಿಕೊಂಡು ಆಖಾಡಕ್ಕೆ ಇಳಿಯುವುದು ಉತ್ತಮ ಎಂಬುದು ಇನ್ನೊಂದು ಪ್ರಬಲ ಬಣದ ನಿಲುವು.

ಉಪರಾಷ್ಟ್ರಪತಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಇಂಡಿಯಾ ಬಣದ ನಾಯಕರ ನಡುವೆ ಔಪಚಾರಿಕ ಅಥವಾ ಅನೌಪಚಾರಿಕವಾಗಿ ಯಾವ ಚರ್ಚೆಯೂ ನಡೆದಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಗುಂಪಿನ ಹಿರಿಯ ಸದಸ್ಯರೊಬ್ಬರು ದ ಫೆಡರಲ್ ಗೆ ತಿಳಿಸಿದ್ದಾರೆ. ಆದರೆ ಎನ್.ಡಿ.ಎ. ಯಾರನ್ನು ಆಯ್ಕೆಮಾಡಿದರೂ ಮೈತ್ರಿಕೂಟ ಸ್ಪರ್ಧೆಗಿಳಿಯುವುದು ಖಚಿತ ಎಂದು ಹೇಳಿದ್ದಾರೆ.

“ಚರ್ಚೆಗಳು ಶೀಘ್ರ ನಡೆಯಲಿವೆ. ನಾವು ಇಂಡಿಯಾ ಬಣದ ಭಾಗವಲ್ಲದೇ ಇರುವ ಇತರ ವಿರೋಧ ಪಕ್ಷಗಳ ಬೆಂಬಲವನ್ನು ಪಡೆಯಲು ಪ್ರಯತ್ನ ನಡೆಸುತ್ತೇವೆ. ಅದರಲ್ಲಿ ಇತ್ತೀಚೆಗೆ ಮೈತ್ರಿಯಿಂದ ಹೊರನಡೆದವರೂ (ಆಪ್ ಸೇರಿ) ಸೇರಿರುತ್ತಾರೆ. ನಮ್ಮ ಮಿತ್ರಪಕ್ಷಗಳಿಂದ ಸಲಹೆ ಬಾರದೇ ಇದ್ದರೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒತ್ತಡ ಹೇರುವುದಿಲ್ಲ. ನಮ್ಮ ಆದ್ಯತೆ ಇರುವುದು ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಲ್ಲ. ಇಡೀ ಮೈತ್ರಿಕೂಟಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು,” ಎಂದು ಕಾಂಗ್ರೆಸ್ಸಿನ ಹಿರಿಯರೊಬ್ಬರು ತಿಳಿಸಿದ್ದಾರೆ.

ನಮಗೆ 2022ರ ಪರಿಸ್ಥಿತಿ ಮರುಕಳಿಸುವುದು ಇಷ್ಟವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಮಾರ್ಗರೇಟ್ ಆಳ್ವ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರಿಂದ ಮಮತಾ ಬ್ಯಾನರ್ಜಿ ಮುನಿಸಿಕೊಂಡಿದ್ದರು. ಧನಕರ್ ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಅವರ ಪಕ್ಷ ಉತ್ತಮ ಸಂಬಂಧ ಹೊಂದಿಲ್ಲದೇ ಇದ್ದರೂ ತೃಣಮೂಲ ಕಾಂಗ್ರೆಸ್ಸಿನ ಅಷ್ಟೂ ಸದಸ್ಯರು ಚುನಾವಣೆಯಲ್ಲಿ ಗೈರಾಗಿದ್ದರು.

ಕ್ಯಾಪ್: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಆಡಳಿತಾರೂಢ ಪಕ್ಷದಲ್ಲಿ ಚರ್ಚೆ ಆರಂಭವಾಗುವ ನಿರೀಕ್ಷೆಯಿದೆ.

Read More
Next Story