ಮಹಾರಾಷ್ಟ್ರ: ಎಂಎನ್‌ಎಸ್‌  ಮತ್ತು ಬಿಜೆಪಿ ಮೈತ್ರಿ?
x

ಮಹಾರಾಷ್ಟ್ರ: ಎಂಎನ್‌ಎಸ್‌ ಮತ್ತು ಬಿಜೆಪಿ ಮೈತ್ರಿ?


ಮುಂಬೈ, ಫೆ. 19- ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಸೋಮವಾರ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದು, ಎರಡು ಪಕ್ಷಗಳ ನಡುವಿನ ಚುನಾವಣೆ ಮೈತ್ರಿ ಕುರಿತ ಊಹಾಪೋಹಗಳಿಗೆ ಇಂಬು ನೀಡಿದೆ.

ʻಹಳೆಯ ಸ್ನೇಹಿತರ ನಡುವೆ ಸಭೆಗಳು ನಡೆಯುತ್ತವೆʼ ಎಂದಿರುವ ಶೆಲಾರ್, ʻವಿವರಗಳನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದುʼ ಎಂದು ಹೇಳಿದರು.ದಾದರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಠಾಕ್ರೆ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿ, ʻರಾಜ್ ಠಾಕ್ರೆ ಮತ್ತು ನಾನು ಬಹಳ ಹಿಂದಿನಿಂದಲೂ ಸ್ನೇಹಿತರು. ಆಗಾಗ ಭೇಟಿಯಾಗಿ ಚರ್ಚಿಸುತ್ತೇವೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಕಡಿವಾಣ ಹಾಕಲು ಮರಾಠರ ಮತಗಳನ್ನು ವಿಭಜಿಸಲು ಬಿಜೆಪಿ ಎಂಎನ್‌ಎಸ್‌ನೊಂದಿಗೆ ಕೈ ಜೋಡಿಸಬಹುದು ಎಂಬ ಊಹಾಪೋಹ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. ಎಂಎನ್‌ಎಸ್ ನಾಯಕರ ನಿಯೋಗ ಇತ್ತೀಚೆಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿತ್ತು. ʻಬಿಜೆಪಿ ಮತ್ತು ಎಂಎನ್‌ಎಸ್ ಸೌಹಾರ್ದ ಸಂಬಂಧ ಹೊಂದಿವೆ. ಆದರೆ, ಮೈತ್ರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ರಾಜಕೀಯ ಚಿತ್ರಣ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಸ್ಪಷ್ಟವಾಗುತ್ತದೆʼ ಎಂದು ಫಡಣವೀಸ್ ಹೇಳಿದ್ದರು.

ಮಗ ಉದ್ಧವ್ ಠಾಕ್ರೆಯನ್ನು ಉತ್ತೇಜಿಸಲು ಬಾಳಾ ಠಾಕ್ರೆ ನಡೆಸಿದ ಪ್ರಯತ್ನಗಳ ವಿರುದ್ಧ ಪ್ರತಿಭಟಿಸಿದ ರಾಜ್ ಠಾಕ್ರೆ, 2006 ರಲ್ಲಿ ಎಂಎನ್‌ಎಸ್‌ ಸ್ಥಾಪಿಸಿದರು. 2009ರ ವಿಧಾನಸಭೆ ಚುನಾವಣೆಯಲ್ಲಿ, ಎಂಎನ್‌ಎಸ್ 288 ಸ್ಥಾನಗಳಲ್ಲಿ 13 ಸ್ಥಾನ ಗೆದ್ದಿತು. ಮರಾಠಿ ಮತಗಳ ವಿಭಜನೆ ಎಂಎನ್‌ಎಸ್‌ ಗೆಲುವಿನ ಪ್ರಮುಖ ಅಂಶವಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಎಂಎನ್‌ ಎಸ್‌ ತನ್ನಪ್ರಾಮುಖ್ಯತೆ ಕಳೆದುಕೊಂಡಿತು.

Read More
Next Story