
ಅಸ್ಸಾಂ ಗಾಯಕ ಜುಬೀನ್ ಗರ್ಗ್ ಸ್ಮರಣಾರ್ಥ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ
ಜುಬೀನ್ ಗರ್ಗ್ ಅವರು ತಮ್ಮ ಸಂಗೀತದ ಮೂಲಕ ಕೇವಲ ಅಸ್ಸಾಂ ಅಷ್ಟೇ ಅಲ್ಲದೆ, ವಿವಿಧ ಪ್ರಾದೇಶಿಕ ಸಂಸ್ಕೃತಿಗಳನ್ನು ಒಂದುಗೂಡಿಸಿದವರಾಗಿದ್ದು ಕನ್ನಡದ ಗೀತೆಗಳನ್ನೂ ಹಾಡಿದ್ದಾರೆ.
ಖ್ಯಾತ ಗಾಯಕ, ಅಸ್ಸಾಂನ ಸಾಂಸ್ಕೃತಿಕ ರಾಯಭಾರಿ ದಿವಂಗತ ಜುಬೀನ್ ಗರ್ಗ್ ಅವರ ಸ್ಮರಣಾರ್ಥ ಅಸ್ಸಾಂನ ಜೋರ್ಹಟ್‌ನಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ, ಗೌರವ ನಮನ ಸಲ್ಲಿಸಿದರು.
ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ನಡೆಸುವಾಗ 52 ವರ್ಷದ ಜುಬೀನ್ ಗರ್ಗ್ ಅವರು ನಿಧನರಾಗಿದ್ದರು. ಅವರ ನಿಧನವು ಇಡೀ ದೇಶದ ಸಂಗೀತಾಸಕ್ತರಿಗೆ, ವಿಶೇಷವಾಗಿ ಈಶಾನ್ಯ ಭಾರತಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತ್ತು.
ಜುಬೀನ್ ಗರ್ಗ್ ಅವರು ತಮ್ಮ ಸಂಗೀತದ ಮೂಲಕ ಕೇವಲ ಅಸ್ಸಾಂ ಅಷ್ಟೇ ಅಲ್ಲದೆ, ವಿವಿಧ ಪ್ರಾದೇಶಿಕ ಸಂಸ್ಕೃತಿಗಳನ್ನು ಒಂದುಗೂಡಿಸಿದವರು. ಅವರ "ಯಾ ಅಲಿ" ಯಂತಹ ಬಾಲಿವುಡ್ ಹಿಟ್ ಗೀತೆಗಳ ಜೊತೆಗೆ, ಅವರು ಕನ್ನಡದಲ್ಲಿಯೂ ಹಲವು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಕರ್ನಾಟಕದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದರು. ಇದೇ ಕಾರಣದಿಂದಾಗಿ, ಮತ್ತೊಂದು ರಾಜ್ಯದ ಗಾಯಕನಿಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಜುಬೀನ್ ಗರ್ಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ.