ಮಸೀದಿ ಬಳಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ: ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ
x
ದೆಹಲಿಯಲ್ಲಿ ನಡೆದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ಮಸೀದಿ ಬಳಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ: ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ

ದೆಹಲಿಯ ಫೈಜ್-ಎ-ಇಲಾಹಿ ಮಸೀದಿ ಬಳಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಕಲ್ಲು ತೂರಾಟ ನಡೆಸಿದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.


ದೆಹಲಿಯ ತುರ್ಕಮಾನ್ ಗೇಟ್ ಪ್ರದೇಶದ ಫೈಜ್-ಎ-ಇಲಾಹಿ ಮಸೀದಿ ಸಮೀಪದ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲು ಜನವರಿ 7ರ ಮುಂಜಾನೆ ನಡೆಸಿದ ಕಾರ್ಯಾಚರಣೆ ಭಾರೀ ಸಂಘರ್ಷಕ್ಕೆ ಕಾರಣವಾಯಿತು. ಸುಮಾರು 10 ಬುಲ್ಡೋಜರ್‌ಗಳೊಂದಿಗೆ ಆರಂಭವಾದ ಈ ಕಾರ್ಯಾಚರಣೆ ವೇಳೆ ಉದ್ರಿಕ್ತ ತಂಡ ಕಲ್ಲು ತೂರಾಟ ನಡೆಸಿ, ತೆರವು ಕಾರ್ಯಾಚರಣೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕಲ್ಲು ತೂರಾಟದ ವೇಳೆ ಏಳು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ಮಧ್ಯರಾತ್ರಿ ಕಾರ್ಯಾಚರಣೆ

ನ್ಯಾಯಾಲಯದ ಆದೇಶದಂತೆ ಅಕ್ರಮ ಒತ್ತುವರಿ ತೆರವುಗೊಳಿಸಲು ದೆಹಲಿ ಪೊಲೀಸರು ಮತ್ತು ಬಿಗಿ ಭದ್ರತಾ ಪಡೆಗಳು ಜನವರಿ 7ರ ಮುಂಜಾನೆ ಸ್ಥಳಕ್ಕೆ ಆಗಮಿಸಿದವು. ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಮಸೀದಿಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ತಡೆಯಲು ಪ್ರಯತ್ನಿಸಿದರು.

ತೆರವು ಕಾರ್ಯಾಚರಣೆ ವಿಡಿಯೊ ಇಲ್ಲಿದೆ

ಕಲ್ಲು ತೂರಾಟ ಮತ್ತು ಸಂಘರ್ಷ

ಒಂದು ಹಂತದಲ್ಲಿ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಮತ್ತು ಗ್ಯಾಸ್ ಬುಲೆಟ್‌ಗಳನ್ನು ಹಾರಿಸಿ ಜನರನ್ನು ಚದುರಿಸಿದರು. ಕಿರಿದಾದ ಗಲ್ಲಿಗಳಿಂದ ಕಲ್ಲು ತೂರಾಟ ಮುಂದುವರಿದ ಕಾರಣ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಯನ್ನು ಸ್ಥಳಕ್ಕೆ ನಿಯೋಜಿಸಲಾಯಿತು. ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಯಿತು.

ಇನ್ನು ಈ ಘಟನೆ ಬಗ್ಗೆ ಜಂಟಿ ಪೊಲೀಸ್ ಕಮಿಷನರ್ ಮಧುರ್ ವರ್ಮಾ ಮಾತನಾಡಿ, "ನ್ಯಾಯಾಲಯದ ಆದೇಶದಂತೆಯೇ ಈ ತೆರವು ಕಾರ್ಯಾಚರಣೆ ನಡೆದಿದೆ. ಹಿಂಸಾಚಾರದಲ್ಲಿ ತೊಡಗಿದವರನ್ನು ವಿಡಿಯೋ ಫೂಟೇಜ್ ಮೂಲಕ ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಗಲಭೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಭಾಗಿಯಾಗಿದ್ದಾರೆ" ಎಂದು ತಿಳಿಸಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.


Read More
Next Story