ನೀಟ್ ಅಕ್ರಮ ಕುರಿತು ತನಿಖೆಗೆ ಒತ್ತಾಯ: ದೆಹಲಿ ಶಿಕ್ಷಣ ಸಚಿವಾಲಯದ ಬಳಿ ಪ್ರತಿಭಟನೆ
x

ನೀಟ್ ಅಕ್ರಮ ಕುರಿತು ತನಿಖೆಗೆ ಒತ್ತಾಯ: ದೆಹಲಿ ಶಿಕ್ಷಣ ಸಚಿವಾಲಯದ ಬಳಿ ಪ್ರತಿಭಟನೆ


ಹೊಸದಿಲ್ಲಿ, ಜೂ.10- ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ಆಗ್ರಹಿಸಿ, ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಸೋಮವಾರ ಇಲ್ಲಿನ ಶಿಕ್ಷಣ ಸಚಿವಾಲಯದ ಬಳಿ ಪ್ರತಿಭಟನೆ ನಡೆಸಿದರು.

ಎನ್‌ಇಇಟಿ-ಯುಜಿ ವೈದ್ಯಕೀಯ ಪ್ರವೇಶಪರೀಕ್ಷೆಯಲ್ಲಿ 1,500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳನ್ನು ಪರಿಶೀಲಿಸಲು ಶಿಕ್ಷಣ ಸಚಿವಾಲಯ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ಹೇಳಿದೆ. 67 ಅಭ್ಯರ್ಥಿಗಳು ಮೊದಲ ಶ್ರೇಯಾಂಕ ಹಂಚಿಕೊಂಡಿದ್ದಾರೆ ಎಂಬ ಆರೋಪದ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅವಿಜಿತ್ ಘೋಷ್ ಮಾತನಾಡಿ, ʻನೀಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳ ಬಗ್ಗೆ ಸ್ವತಂತ್ರ ಮತ್ತು ಪಾರದರ್ಶಕ ತನಿಖೆಯನ್ನು ವಿದ್ಯಾರ್ಥಿಗಳು ಒತ್ತಾಯಿಸುತ್ತಾರೆ,ʼ ಎಂದು ಹೇಳಿದರು.

ʻಪ್ರವೇಶ ಪರೀಕ್ಷೆಗಳ ಸಮಗ್ರತೆಯನ್ನು ಕಾಪಾಡಲು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತ ಪರೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದು ನಾವು ಸಚಿವಾಲಯವನ್ನು ಒತ್ತಾಯಿಸುತ್ತೇವೆ. ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯ ತಕ್ಷಣ ಕ್ರಮ ತೆಗೆದುಕೊಳ್ಳಬೇಕು,ʼ ಎಂದು ಘೋಷ್ ಹೇಳಿದ್ದಾರೆ.

ಆದರೆ, ಎನ್‌ಟಿಎ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸಮಯ ಕಳೆದುಕೊಂಡವರಿಗೆ ನೀಡಲಾದ ಹೆಚ್ಚಿನ ಅಂಕಗಳು ಇದಕ್ಕೆ ಕಾರಣ ಎಂದು ಹೇಳಿದೆ.

ಹರ್ಯಾಣದ ಒಂದೇ ಪರೀಕ್ಷಾ ಕೇಂದ್ರದ ಎಂಟು ಸೇರಿದಂತೆ 67 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಹಂಚಿಕೊಂಡಿದ್ದರು. ಈ ವರ್ಷ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪರೀಕ್ಷೆಯಲ್ಲಿನ ಅವ್ಯವಸ್ಥೆ ಬಗ್ಗೆ ಹಲವು ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದು, ವಿಷಯ ರಾಜಕೀಕರಣಗೊಂಡಿದೆ.

Read More
Next Story