
Delhi Rains | ದೆಹಲಿ: ಜೋರು ಮಳೆ, 100ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಟ್ವೀಟ್ ಮೂಲಕ ಈ ಅಡಚಣೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಕ್ಕೆ ಹೊರಡುವ ಮೊದಲು ಯೋಜನೆ ಹಾಕುವಂತೆ ಸಹಕಾರ ಕೋರಿದೆ.
ಭಾನುವಾರ ಮುಂಜಾನೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳು ಜಲಾವೃತಗೊಂಡಿವೆ. ಮೋತಿ ಬಾಗ್, ಮಿಂಟೋ ರಸ್ತೆ ಮತ್ತು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಸಮೀಪದ ರಸ್ತೆಗಳು ಮುಚ್ಚಿಹೋಗಿವೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದ 100ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ, ಜೊತೆಗೆ 25ಕ್ಕಿಂತ ಹೆಚ್ಚು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಟ್ವೀಟ್ ಮೂಲಕ ಈ ಅಡಚಣೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಕ್ಕೆ ಹೊರಡುವ ಮೊದಲು ಯೋಜನೆ ಹಾಕುವಂತೆ ಸಹಕಾರ ಕೋರಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ರಾತ್ರಿಯಿಂದ ಸುರಿದ ಮಳೆಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಅಂಡರ್‌ಪಾಸ್‌ನಲ್ಲಿ ತೀವ್ರವಾಗಿ ನೀರು ನಿಂತಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಪಶ್ಚಿಮ/ವಾಯವ್ಯ ದಿಕ್ಕಿನಿಂದ ದೆಹಲಿ ಮತ್ತು ಸಮೀಪದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಉತ್ತರಾಖಂಡ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೇಗ ಬಂದ ಮುಂಗಾರು
ಈ ಬಾರಿ ಮುಂಗಾರು ಕೇರಳಕ್ಕೆ ವಾಡಿಕೆಗಿಂತ ಮೊದಲೇ, ಮುಂದಿನ 24 ಗಂಟೆಗಳಲ್ಲಿ ಪ್ರವೇಶಿಸಲಿದೆ, ಇದು 16 ವರ್ಷಗಳಲ್ಲಿ ಮೊದಲ ಬಾರಿಗೆ ಸಂಭವಿಸುತ್ತಿದೆ. ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಮುನ್ಸೂಚನೆಯನ್ನು ಐಎಂಡಿ ನೀಡಿದೆ.