ದೆಹಲಿ ವಾಯುಮಾಲಿನ್ಯ: ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರಷ್ಟು ‘ವರ್ಕ್‌ ಫ್ರಮ್‌ ಹೋಮ್‌’
x

ದೆಹಲಿ ವಾಯುಮಾಲಿನ್ಯ: ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರಷ್ಟು ‘ವರ್ಕ್‌ ಫ್ರಮ್‌ ಹೋಮ್‌’

ಕಚೇರಿಗೆ ಬರುವ ನೌಕರರ ಸಂಚಾರದಿಂದ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಕಚೇರಿ ಸಮಯಗಳಲ್ಲಿ ಬದಲಾವಣೆ (Staggered working hours) ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ.


ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ (GRAP) ಹಂತ-3ರ ಅಡಿಯಲ್ಲಿ ದೆಹಲಿ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇದರ ಅನ್ವಯ, ದೆಹಲಿಯ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ (Work From Home) ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಹೆಸರಿನಲ್ಲಿ ಸೋಮವಾರ ಈ ಆದೇಶ ಹೊರಬಿದ್ದಿದ್ದು, ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 5ರ ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಲಾಗಿದೆ. ದೆಹಲಿಯ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಾಹನಗಳ ಸಂಚಾರವನ್ನು ಕಡಿಮೆ ಮಾಡುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.

ಖಾಸಗಿ ವಲಯಕ್ಕೂ ಮೊದಲ ಬಾರಿಗೆ ಕಡ್ಡಾಯ ನಿಯಮ

ಸಾಮಾನ್ಯವಾಗಿ ಖಾಸಗಿ ಕಂಪನಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ನೀಡುವಂತೆ ಕೇವಲ ಸಲಹೆಗಳನ್ನು ನೀಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಖಾಸಗಿ ಕಚೇರಿಗಳಿಗೂ ‘ಕಡ್ಡಾಯವಾಗಿ’ ಶೇ.50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು ಎಂದು ಆದೇಶಿಸಲಾಗಿದೆ. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ಜೊತೆಗೆ, ಕಚೇರಿಗೆ ಬರುವ ನೌಕರರ ಸಂಚಾರದಿಂದ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಕಚೇರಿ ಸಮಯಗಳಲ್ಲಿ ಬದಲಾವಣೆ (Staggered working hours) ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ, ಆಡಳಿತಾತ್ಮಕ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಕಚೇರಿಗೆ ಹಾಜರಾಗಬೇಕು, ಆದರೆ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಕಚೇರಿಯಲ್ಲಿ ಭೌತಿಕವಾಗಿ ಇರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಗತ್ಯ ಸೇವೆಗಳಿಗೆ ವಿನಾಯಿತಿ

ಈ ನಿರ್ಬಂಧಗಳಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು, ಖಾಸಗಿ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕ ದಳ, ಸಾರ್ವಜನಿಕ ಸಾರಿಗೆ, ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಂತಹ ತುರ್ತು ಮತ್ತು ಅಗತ್ಯ ಸೇವೆಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿಯಮ ಮೀರಿದರೆ ಕಾನೂನು ಕ್ರಮ

ಈ ಆದೇಶದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ದಂಡಾಧಿಕಾರಿಗಳು, ಡಿಸಿಪಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ಹೊರಡಿಸಲಾದ ಈ ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೆಕ್ಷನ್ 15 ಮತ್ತು 16ರ ಅಡಿಯಲ್ಲಿ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪರಿಸರ ಇಲಾಖೆ ಎಚ್ಚರಿಸಿದೆ.

ಗಂಭೀರ ಸ್ವರೂಪದಲ್ಲಿ ವಾಯು ಗುಣಮಟ್ಟ

ದೆಹಲಿಯಲ್ಲಿ ಸೋಮವಾರದಂದು ವಾಯು ಗುಣಮಟ್ಟ ಸೂಚ್ಯಂಕ (AQI) 382 ರಷ್ಟಿದ್ದು, ಇದು ‘ಅತ್ಯಂತ ಕಳಪೆ’ (Very Poor) ವಿಭಾಗದಲ್ಲಿ ದಾಖಲಾಗಿದೆ. ನಗರದ 15 ಮಾನಿಟರಿಂಗ್ ಕೇಂದ್ರಗಳಲ್ಲಿ AQI ಮಟ್ಟ 400ರ ಗಡಿ ದಾಟಿದ್ದು, ಪರಿಸ್ಥಿತಿ ‘ಗಂಭೀರ’ (Severe) ಹಂತ ತಲುಪಿದೆ. ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM) ಪ್ರಕಾರ, ದೆಹಲಿಯ ಮಾಲಿನ್ಯದಲ್ಲಿ ವಾಹನಗಳ ಹೊರಸೂಸುವಿಕೆಯ ಪಾಲು ಶೇ.21.6 ರಷ್ಟಿದೆ. ಹೀಗಾಗಿಯೇ ವಾಹನಗಳ ಓಡಾಟ ತಗ್ಗಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Read More
Next Story