
ಸಿಬಿಐ ಬಲೆಗೆ ಬಿಆರ್‌ಎಸ್ ನಾಯಕಿ ಕೆ.ಕವಿತಾ
ಏಪ್ರಿಲ್ 11- ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿಯನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದು, ಜೈಲಿನಲ್ಲಿ ಕವಿತಾ ಅವರ ವಿಚಾರಣೆ ನಡೆಸಿದ್ದರು. ಸಹಆರೋಪಿ ಬುಚ್ಚಿ ಬಾಬು ಅವರ ಫೋನಿನಲ್ಲಿರುವ ವಾಟ್ಸಾಪ್ ಚಾಟ್ ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಕವಿತಾ ಅವರನ್ನು ಪ್ರಶ್ನಿಸಲಾಯಿತು.
ಬಿಆರ್‌ಎಸ್ ನಾಯಕಿಯ ವಿಚಾರಣೆಗೆ ಸಿಬಿಐ, ದೆಹಲಿ ನ್ಯಾಯಾಲಯದ ಅನುಮತಿ ಪಡೆದುಕೊಂಡಿತ್ತು. ಜೈಲು ಅಧೀಕ್ಷಕರಿಗೆ ಲಿಖಿತ ನೋಟಿಸ್ ಸಲ್ಲಿಸಿದ ನಂತರ ಕವಿತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಸಿಬಿಐಗೆ ಅನುಮತಿ ನೀಡಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮಂಗಳವಾರ 14 ದಿನ ವಿಸ್ತರಿಸಿದೆ. ಸೋಮವಾರ ಮಧ್ಯಂತರ ಜಾಮೀನನ್ನು ನಿರಾಕರಿಸಲಾಗಿದೆ. ಅಪರಾಧದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುವುದನ್ನು ಮತ್ತು ಸಾಕ್ಷಿ ನಾಶಕ್ಕೆ ಕಾರಣವಾಗುವ ʻಉದ್ದೇಶಪೂರ್ವಕʼ ಕೃತ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಇಡಿ ಕವಿತಾ (46) ಅವರನ್ನು ಬಂಧಿಸಿತ್ತು.