ಜಿಮ್ ಮಾಲೀಕನ ಮೇಲೆ ಹಲ್ಲೆ, ಪತ್ನಿಗೆ ಲೈಂಗಿಕ ಕಿರುಕುಳ, ಮಗನ ಬೆತ್ತಲೆಗೊಳಿಸಿದ ದುಷ್ಕರ್ಮಿಗಳು!
x
ದೆಹಲಿಯಲ್ಲಿ ನಡೆದ ಭೀಕರ ದಾಳಿಯ ಸಿಸಿಟಿವಿ ದೃಶ್ಯ

ಜಿಮ್ ಮಾಲೀಕನ ಮೇಲೆ ಹಲ್ಲೆ, ಪತ್ನಿಗೆ ಲೈಂಗಿಕ ಕಿರುಕುಳ, ಮಗನ ಬೆತ್ತಲೆಗೊಳಿಸಿದ ದುಷ್ಕರ್ಮಿಗಳು!

ದೆಹಲಿಯ ಲಕ್ಷ್ಮಿ ನಗರದಲ್ಲಿ ಜಿಮ್ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿ ಮತ್ತು ಅವರ ಮಗನ ಮೇಲೆ ಭೀಕರ ಹಲ್ಲೆ ನಡೆದಿದೆ. ಮಗನನ್ನು ರಸ್ತೆಯಲ್ಲೇ ಬೆತ್ತಲೆಗೊಳಿಸಿ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Click the Play button to hear this message in audio format

ದೆಹಲಿಯ ಲಕ್ಷ್ಮಿ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಆತನ ಪತ್ನಿಗೂ ಲೈಂಗಿಕ ಕಿರುಕುಳ ನೀಡಿದ್ದು, ಆತನ ಮಗನನ್ನು ರಸ್ತೆಯಲ್ಲಿ ಬೆತ್ತಲೆಗೊಳಿಸಿ ಅಮಾನವೀಯವಾಗಿ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಏನಿದು ಘಟನೆ?

ಜನವರಿ 2 ರಂದು ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ರಾಜೇಶ್ ಗರ್ಗ್ ಅವರು ತಮ್ಮ ಮನೆಯ ಬೇಸ್‌ಮೆಂಟ್‌ನಲ್ಲಿ ಜಿಮ್ ನಡೆಸುತ್ತಿದ್ದಾರೆ. ಜಿಮ್‌ನ ಮೇಲ್ವಿಚಾರಕ (Caretaker) ಸತೀಶ್ ಯಾದವ್ ಎಂಬಾತ ತಮಗೆ ವಂಚಿಸಿ, ಜಿಮ್ ಅನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾನೆ ಎಂದು ಗರ್ಗ್ ಆರೋಪಿಸಿದ್ದಾರೆ.

ನಡೆದಿದ್ದೇನು?

ಜಿಮ್‌ನಲ್ಲಿ ನೀರಿನ ಸೋರಿಕೆಯನ್ನು ಪರೀಕ್ಷಿಸಲು ರಾಜೇಶ್ ಗರ್ಗ್ ಮತ್ತು ಅವರ ಪತ್ನಿ ಬೇಸ್‌ಮೆಂಟ್‌ಗೆ ಹೋದಾಗ, ಸತೀಶ್ ಯಾದವ್ ಮತ್ತು ಆತನ ಸಂಗಡಿಗರು ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದಾರೆ. ಗರ್ಗ್ ಅವರಿಗೆ ಕಬ್ಬಿಣದ ರಾಡ್‌ಗಳಿಂದ ಹೊಡೆದು, ಅವರ ಮುಖ ಮತ್ತು ಹಣೆಗೆ ತೀವ್ರ ಗಾಯಗೊಳಿಸಿದ್ದಾರೆ.

ಮಗನನ್ನು ಬೆತ್ತಲೆಗೊಳಿಸಿ ವಿಕೃತಿ

ತಂದೆ-ತಾಯಿಯನ್ನು ಉಳಿಸಲು ಬಂದ ಮಗನನ್ನು ಎಳೆದುಕೊಂಡು ಹೋದ ದುಷ್ಕರ್ಮಿಗಳು, ರಸ್ತೆಯಲ್ಲೇ ಆತನ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ್ದಾರೆ. ದಾಳಿಯಿಂದಾಗಿ ಮಗನ ತಲೆಗೆ ಪೆಟ್ಟಾಗಿದ್ದು, ಹಲ್ಲು ಮುರಿದಿದೆ.

ಮಹಿಳೆಯ ಮೇಲೆ ದೌರ್ಜನ್ಯ

ಗರ್ಗ್ ಅವರ ಪತ್ನಿಯ ಕೂದಲನ್ನು ಹಿಡಿದು ಎಳೆದಾಡಿ, ಮುಖಕ್ಕೆ ಹೊಡೆದು ರಸ್ತೆಗೆ ತಳ್ಳಲಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. "ನಿಮ್ಮ ವಂಶವನ್ನೇ ನಿರ್ನಾಮ ಮಾಡುತ್ತೇವೆ" ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕ್ರಮ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಖ್ಯ ಆರೋಪಿ ಸತೀಶ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ವಿಕಾಸ್ ಯಾದವ್, ಶುಭಂ ಯಾದವ್ ಮತ್ತು ಓಂಕಾರ್ ಯಾದವ್ ಎಂಬುವವರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಜೇಶ್ ಗರ್ಗ್ ಅವರ ಪತ್ನಿ ನೀಡಿರುವ ದೂರಿನ ಪ್ರಕಾರ, ಸತೀಶ್ ಯಾದವ್‌ನನ್ನು ಕೇವಲ ಮೇಲ್ವಿಚಾರಕನಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆತ ಮಾಲೀಕತ್ವಕ್ಕಾಗಿ ಜಗಳ ತೆಗೆದು ಈ ಹಿಂದೆಯೂ ಹಲವು ಬಾರಿ ಹಿಂಸಾತ್ಮಕವಾಗಿ ವರ್ತಿಸಿದ್ದನು.

Read More
Next Story