
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಡಿ ಮೇಲ್ಮನವಿಗೆ ಉತ್ತರಿಸುವಂತೆ ಸೋನಿಯಾ, ರಾಹುಲ್‌ಗೆ ದೆಹಲಿ ಹೈಕೋರ್ಟ್ ಸೂಚನೆ
ವಿಚಾರಣಾ ನ್ಯಾಯಾಲಯದಲ್ಲಿ ಇಡಿ ಆರೋಪಗಳನ್ನು ತಳ್ಳಿ ಹಾಕಲಾಗಿತ್ತು. ಆ ಬಳಿಕ ಇಡಿ ಮೇಲ್ಮನವಿ ಸಲ್ಲಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಡಿ.22) ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು 2026ರ ಮಾರ್ಚ್ 12ಕ್ಕೆ ನಿಗದಿಪಡಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಐವರ ವಿರುದ್ಧ ಇಡಿ ಹೊರಿಸಿದ್ದ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಪರಿಗಣಿಸಲು ಡಿಸೆಂಬರ್ 16ರಂದು ದೆಹಲಿಯ ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಇಡಿ ಅಂದೇ ಹೇಳಿಕೆ ನೀಡಿತ್ತು. ಇದೀಗ ಇಡಿ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.
ರಾಜಕೀಯ ದ್ವೇಷದ ಆರೋಪ
ವಿಚಾರಣಾ ನ್ಯಾಯಾಲಯವು ಇಡಿ ಆರೋಪಗಳನ್ನು ತಳ್ಳಿಹಾಕಿದ ನಂತರ ಪ್ರತಿಕ್ರಿಯಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ತೀರ್ಪು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ "ಮುಖಕ್ಕೆ ಬಾರಿಸಿದ ಏಟು" ಎಂದು ಬಣ್ಣಿಸಿದ್ದರು.
"ಇದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣ. ಗಾಂಧಿ ಕುಟುಂಬಕ್ಕೆ ಕಿರುಕುಳ ನೀಡಲೆಂದೇ ಇದನ್ನು ಸೃಷ್ಟಿಸಲಾಗಿತ್ತು. ಈ ತೀರ್ಪಿನ ನಂತರ ಮೋದಿ ಮತ್ತು ಶಾ ರಾಜೀನಾಮೆ ನೀಡಬೇಕು. ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ," ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಏನಿದು ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (AJL) ಸೇರಿದ ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು 'ಯಂಗ್ ಇಂಡಿಯನ್' ಎಂಬ ಖಾಸಗಿ ಕಂಪನಿಯ ಮೂಲಕ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಇಡಿ ಆರೋಪವಾಗಿದೆ. ಈ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಯಂಗ್ ಇಂಡಿಯನ್ ಕಂಪನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಸಂಚು ರೂಪಿಸಿದ ಆರೋಪಗಳನ್ನು ಹೊರಿಸಲಾಗಿದೆ.

