ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ವಿಸ್ತರಣೆ
ತಮ್ಮ ಮತ್ತು ಪೋಷಕರ ಹೆಸರನ್ನು ಬದಲಿಸುವ ಮೂಲಕ ಖೇಡ್ಕರ್ ಆರು ಬಾರಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಯುಪಿಎಸ್‌ಸಿ ಆರೋಪಿಸಿದೆ. ಆಯೋಗಕ್ಕೆ ತಮ್ಮ ಉಮೇದುವಾರಿಕೆಯನ್ನು ರದ್ದುಗೊಳಿಸುವ ಅಧಿಕಾರವಿಲ್ಲ.ಡಿಒಪಿಟಿ ಮಾತ್ರ ತನ್ನ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂದು ಪೂಜಾ ಅವರು ಹೇಳಿದ್ದಾರೆ.
ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೆ ವಂಚನೆ ಮಾರ್ಗದಿಂದ ಒಬಿಸಿ ಮತ್ತು ಅಂಗವೈಕಲ್ಯ ಮೀಸಲು ಪಡೆದುಕೊಂಡ ಆರೋಪದ ಮೇಲೆ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವಜಾಗೊಳಿಸಿದೆ. ಆಯೋಗಕ್ಕೆ ತನ್ನ ಉಮೇದುವಾರಿಕೆಯನ್ನು ರದ್ದುಗೊಳಿಸುವ ಅಧಿಕಾರವಿಲ್ಲ ಎಂದು ಅವರು ದೆಹಲಿ ಹೈಕೋರ್ಟ್ ಕದ ತಟ್ಟಿದ್ದರು.
ಯುಪಿಎಸ್‌ಸಿ ಕಳೆದ ತಿಂಗಳು ಖೇಡ್ಕರ್ ಅವರ ಉಮೇದುವಾರಿಕೆ ರದ್ದುಗೊಳಿಸಿ, ವಂಚನೆ ಆರೋಪದ ಮೇಲೆ ಭವಿಷ್ಯದಲ್ಲಿ ಯಾವುದೇ ಪರೀಕ್ಷೆ ತೆಗೆದುಕೊಳ್ಳುವುದನ್ನು ನಿಷೇಧಿಸಿತು. ಈ ಪ್ರಕರಣದಲ್ಲಿ ಖೇಡ್ಕರ್, ನಿರೀಕ್ಷಣಾ ಜಾಮೀನು ಕೋರಿದ್ದರು.
ಡಿಒಪಿಟಿ ಮಾತ್ರ ಕ್ರಮ ತೆಗೆದುಕೊಳ್ಳಬಹುದು: ಪ್ರೊಬೇಷನರಿ ಅಧಿಕಾರಿಯಾಗಿ ಆಯ್ಕೆಯಾದ ನಂತರ, ಯುಪಿಎಸ್‌ಸಿಗೆ ಉಮೇದುವಾರಿಕೆ ಯನ್ನು ರದ್ದುಗೊಳಿಸುವ ಅಧಿಕಾರವಿಲ್ಲ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಾತ್ರ ತನ್ನ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ತಮ್ಮ ಮತ್ತು ಪೋಷಕರ ಹೆಸರನ್ನು ಬದಲಿಸುವ ಮೂಲಕ ಖೇಡ್ಕರ್ ಆರು ಬಾರಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಆಯೋಗ ಆರೋಪಿಸಿದೆ. ʻ2012 ರಿಂದ 2022 ರವರೆಗೆ ತನ್ನ ಹೆಸರು ಅಥವಾ ಉಪನಾಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತಾವು ಆಯೋಗಕ್ಕೆ ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಯುಪಿಎಸ್‌ಸಿ ಬಯೋಮೆಟ್ರಿಕ್ ಮೂಲಕ ನನ್ನ ಗುರುತನ್ನು ಪರಿಶೀಲಿಸಿದೆ. ನನ್ನ ದಾಖಲೆಗಳು ನಕಲಿಯಲ್ಲ ಅಥವಾ ತಪ್ಪಾಗಿಲ್ಲ. ಶೈಕ್ಷಣಿಕ ಪ್ರಮಾಣಪತ್ರ, ಆಧಾರ್ ಕಾರ್ಡ್, ಜನ್ಮ ದಿನಾಂಕ ಮತ್ತು ಇತರ ವೈಯಕ್ತಿಕ ಮಾಹಿತಿ ಸರಿಯಾಗಿದೆ,ʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಗುರುತಿನ ಪರಿಶೀಲನೆಗಳನ್ನು ಡಿಒಪಿಟಿ ಮಾಡಿದೆ. ಏಮ್ಸ್ ರಚಿಸಿದ ವೈದ್ಯಕೀಯ ಮಂಡಳಿಯು ವೈದ್ಯಕೀಯ ಪರೀಕ್ಷೆ ನಡೆಸಿ, ನನ್ನ ಅಂಗವೈಕಲ್ಯ ಶೇ.47 ಎಂದು ಹೇಳಿದೆ ಎಂದು ತಿಳಿಸಿದರು.
ಜಾಮೀನು ಅರ್ಜಿಗೆ ವಿರೋಧ: ಆಗಸ್ಟ್ 21 ರಂದು ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಯುಪಿಎಸ್‌ಸಿ ವಿರೋಧಿಸಿತ್ತು. ದೆಹಲಿ ಪೊಲೀಸರು ಕೂಡ ಖೇಡ್ಕರ್ ಅವರ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯ ವನ್ನು ಕೋರಿದ್ದರು.