
ಜಾಮೀನು ಪ್ರಶ್ನಿಸಿದ ಇಡಿ: ಕೇಜ್ರಿವಾಲ್ ಬಿಡುಗಡೆಗೆ ಕಂಟಕ!
ವಿಚಾರಣಾ ನ್ಯಾಯಾಲಯ ಗುರುವಾರ ಸಂಜೆ ನೀಡಿದ ಆದೇಶವನ್ನು ಹೈಕೋರ್ಟಿನಲ್ಲಿ ಇಡಿ ಪ್ರಶ್ನಿಸಿದೆ.
ವಿಚಾರಣಾ ನ್ಯಾಯಾಲಯದ ಜಾಮೀನು ಮಂಜೂರು ಆದೇಶವನ್ನು ಜಾರಿ ಮಾಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್ 21) ಹೇಳಿರುವುದರಿಂದ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಹಿನ್ನಡೆಯಾಗಿದೆ.
ಇಡಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತುರ್ತು ವಿಚಾರಣೆಗೆ ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್ ಮತ್ತು ರವೀಂದರ್ ದುಡೇಜಾ ಅವರ ಪೀಠವು ಪ್ರಕರಣದ ಕಡತ 10-15 ನಿಮಿಷಗಳಲ್ಲಿ ತನಗೆ ಬರಲಿದ್ದು, ಆನಂತರ ವಿಚಾ ರಣೆ ನಡೆಸಲಾಗುವುದು ಎಂದು ಹೇಳಿದೆ. ಅಲ್ಲಿಯವರೆಗೆ ವಿಚಾರಣೆ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯ ಗುರುವಾರ ಸಂಜೆ ನೀಡಿದ ಆದೇಶವನ್ನು ಇಡಿ ಪ್ರಶ್ನಿಸಿದೆ. ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಪ್ರಕರಣದಲ್ಲಿ ವಾದಿಸಲು ಇಡಿಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ಹೇಳಿದ್ದು, ವಿಚಾರಣೆ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿದರು.
ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಬಳಿಕ ಮಾರ್ಚ್ 21 ರಂದು ಅವರನ್ನು ಇಡಿ ಬಂಧಿಸಿತ್ತು.