ದೆಹಲಿ ಕೋಚಿಂಗ್ ಸೆಂಟರ್ ದುರಂತ: ಗೃಹ ಸಚಿವಾಲಯದಿಂದ ತನಿಖಾ ಸಮಿತಿ ರಚನೆ
x
ನವದೆಹಲಿಯಲ್ಲಿ ಕೋಚಿಂಗ್ ಕೇಂದ್ರದಲ್ಲಿ ಮುಳುಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವಿಗೀಡಾದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ದೆಹಲಿ ಕೋಚಿಂಗ್ ಸೆಂಟರ್ ದುರಂತ: ಗೃಹ ಸಚಿವಾಲಯದಿಂದ ತನಿಖಾ ಸಮಿತಿ ರಚನೆ

ʻಕೇಂದ್ರವು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ದೆಹಲಿಯ ಸಿಎಸ್ ಆಗಿ ಎರಡು ವಿಸ್ತರಣೆ ನೀಡಿದೆ. ಅವರು ನಗರವನ್ನು ಹಾಳುಮಾಡುತ್ತಿದ್ದಾರೆ. ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿದ್ದ ಸಿಎಸ್‌, ಹೂಳು ತೆಗೆಯುವ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಲಿಖಿತ ಉತ್ತರ ನೀಡಿದ್ದರು. ಚರಂಡಿಗಳ ಹೂಳು ತೆಗೆಯುವ ಬಗ್ಗೆ ಅವರು ಹೈಕೋರ್ಟ್‌ ನ ದಾರಿ ತಪ್ಪಿಸಿದ್ದಾರೆ,ʼ ಎಂದು ನಗರಾಭಿವೃದ್ಧಿ ಸಚಿವ ಸೌರವ್‌ ಭಾರದ್ವಾಜ್‌ ಆರೋಪಿಸಿದ್ದಾರೆ.


ದೆಹಲಿಯ ಕೋಚಿಂಗ್ ಸೆಂಟರ್ ದುರಂತ ಕುರಿತು ತನಿಖೆ ನಡೆಸಲು ಗೃಹ ಸಚಿವಾಲಯ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಘಟನೆಗೆ ಕಾರಣಗಳನ್ನು ಪರಿಶೀಲಿಸುತ್ತದೆ, ಜವಾಬ್ದಾರಿಯನ್ನು ನಿಗದಿಪಡಿಸುತ್ತದೆ, ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ ಮತ್ತು ಕಾರ್ಯನೀತಿಯಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಸೋಮವಾರ (ಜುಲೈ 29) ದೆಹಲಿ ಕಂದಾಯ ಸಚಿವೆ ಅತಿಶಿ ಅವರಿಗೆ ವರದಿ ಸಲ್ಲಿ ಸಿದ್ದು, ಕೇಂದ್ರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಘಟನೆಗೆ ಕಾರಣವನ್ನು ಪತ್ತೆಹಚ್ಚಲು ಮತ್ತು ಜವಾಬ್ದಾರಿ ಯನ್ನು ಹೊರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಅತಿಶಿ ಅವರು ಮ್ಯಾಜಿಸ್ಟ್ರೇಟ್ ತನಿಖೆಯ ವರದಿಯನ್ನು ಸಲ್ಲಿಸುವಲ್ಲಿ ವಿಳಂಬವಾಗಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಎಚ್ಚರಿಸಿದ್ದರು; ರಾತ್ರಿ 10 ಗಂಟೆಯೊಳಗೆ ಸಲ್ಲಿಸುವಂತೆ ಸೂಚಿಸಿದ್ದರು.

ಮುಖ್ಯ ಕಾರ್ಯದರ್ಶಿ ವರದಿ: ಘಟನೆ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ (ಕೇಂದ್ರ) ಅವರು ವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಮೂವರು ಐಎಎಸ್‌ ಆಕಾಂಕ್ಷಿಗಳಾದ ಉತ್ತರ ಪ್ರದೇಶದ ಶ್ರೇಯಾ ಯಾದವ್‌, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ನೆವಿನ್‌ ಡಾಲ್ವಿನ್‌ ಅವರು ಶನಿವಾರ ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ತುಂಬಿ ಮೃತಪಟ್ಟಿದ್ದರು.

ಮಧ್ಯಂತರ ವರದಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀಡಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದ ರಸ್ತೆಯು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಗೆ ಸೇರಿರುವುದರಿಂದ, ನಾಗರಿಕ ಸಂಸ್ಥೆಯಿಂದ ವರದಿಯನ್ನು ಕೇಳಲಾಗಿದೆ ಎಂದು ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಶಿಕ್ಷೆ: ಪ್ರದೇಶದ ಒಳಚರಂಡಿ ವ್ಯವಸ್ಥೆಯ ನಿರ್ವಹಣೆ ಹೊತ್ತಿರುವ ಸಹಾಯಕ ಎಂಜಿನಿಯರ್ ಅನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಕಿರಿಯ ಎಂಜಿನಿಯರ್‌ ನ್ನು ವಜಾಗೊಳಿಸಲಾಗಿದೆ ಎಂದು ಎಂಸಿಡಿ ವರದಿಯಲ್ಲಿ ತಿಳಿಸಿದೆ.

ನೀರಾವರಿ ಮತ್ತು ಪ್ರವಾಹ ನಿಯಂತ್ರಣ, ಪಿಡಬ್ಲ್ಯುಡಿ, ಎಂಸಿಡಿ, ಎನ್‌ಡಿಎಂಸಿ, ಡಿಡಿಎ ಮತ್ತು ದೆಹಲಿ ಕಂಟೋನ್ಮೆಂಟ್ ಬೋರ್ಡ್ ಸೇರಿದಂತೆ ಆರು ಸಂಸ್ಥೆಗಳಿಂದ ಹೂಳು ತೆಗೆಯುವ ವರದಿಯನ್ನು ಕೇಳಲಾಗಿದೆ ಮತ್ತು ವರದಿಗಳನ್ನು ಜೂನ್ 6 ರಂದು ಸಚಿವರಿಗೆ (ನಗರಾಭಿವೃದ್ಧಿ) ಸಲ್ಲಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ವರದಿ ತಿಳಿಸಿದೆ.

ಹೈಕೋರ್ಟ್‌ನ ಆದೇಶದಂತೆ ಹೂಳು ತೆಗೆಯುವ ಸಂಸ್ಥೆಗಳನ್ನು ಮೂರನೇ ವ್ಯಕ್ತಿಯಿಂದ ಲೆಕ್ಕಪರಿಶೋಧನೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಎಲ್ಲ ಇಲಾಖೆಗಳಿಗೆ ಪತ್ರ ಬರೆದಿದೆ.

ಅತಿಶಿ ಎಚ್ಚರಿಕೆ: ಅತಿಶಿ ತಮ್ಮ ಟಿಪ್ಪಣಿಯಲ್ಲಿ, ʻರಾಜಿಂದರ್ ನಗರ ಪ್ರದೇಶದಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಶನಿವಾರ (ಜುಲೈ 27) ರಾತ್ರಿ 11.20 ಕ್ಕೆ ನಿರ್ದೇಶನ ನೀಡಿದ್ದೇನೆ. ಸಮಿತಿಯು 24 ಗಂಟೆಗಳೊಳಗೆ ವರದಿ ಸಲ್ಲಿಸಬೇಕು. ಆದರೆ, 40 ಗಂಟೆ ಕಳೆದಿದ್ದರೂ ಘಟನೆ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಅಧಿಕೃತ ವರದಿ ಅಥವಾ ಮಾಹಿತಿಯನ್ನು ನಾನು ಸ್ವೀಕರಿಸಿಲ್ಲ. ದಿಲ್ಲಿ ಸರ್ಕಾರದ ಅಧಿಕಾರಿಗಳು ದುರಂತದ ವಿಚಾರಣೆ ಬಗ್ಗೆ ಗಂಭೀರವಾಗಿಲ್ಲ, ಅಥವಾ ಅವರು ಯಾರನ್ನಾದರೂ ರಕ್ಷಿಸಲು ಪ್ರಯತ್ನಿಸು ತ್ತಿದ್ದಾರೆ ಎಂಬ ಸಂಶಯ ಮೂಡುತ್ತದೆ,ʼ ಎಂದು ಸಚಿವರು ಹೇಳಿದರು.

ದೆಹಲಿ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ಅವರು ʼಫೆಬ್ರವರಿಯಿಂದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಚರಂಡಿಯ ಹೂಳು ಕುರಿತು ಸಮಗ್ರ ಕಾರ್ಯತಂತ್ರವನ್ನು ರೂಪಿಸಲು ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಸಿಎಸ್‌ ಪ್ರತಿಕ್ರಿಯಿಸದೆ ನುಣುಚಿಕೊಂಡರುʼ ಎಂದು ಆರೋಪಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್, ʻನಗರದಲ್ಲಿ ಚರಂಡಿಗಳ ಹೂಳು ತೆಗೆಯುವ ಕಾಮಗಾರಿ ಸರಿಯಾಗಿ ನಡೆದಿಲ್ಲ.ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಫೆಬ್ರವರಿ 6 ರಂದು ಮಳೆಗಾಲಕ್ಕೆ ಸಮಗ್ರ ಕಾರ್ಯತಂತ್ರವನ್ನು ರೂಪಿಸಲು ಎಲ್ಲ ಇಲಾಖೆಗಳ ಸಭೆಗೆ ಸೂಚನೆ ನೀಡಿದ್ದೆ. ಫೆಬ್ರವರಿ 13 ರಂದು ನಡೆದ ಸಭೆಗೆ ಒಬ್ಬ ಐಎಎಸ್ ಅಧಿಕಾರಿಯೂ ಬರಲಿಲ್ಲ. ಇಲಾಖೆಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮಾತ್ರ ಹಾಜರಿದ್ದರು. ಇದನ್ನು ಸಭೆಯ ನಡಾವಳಿಯಲ್ಲಿಯೂ ಉಲ್ಲೇಖಿಸಲಾಗಿದೆ,ʼ ಎಂದು ಹೇಳಿದರು.

ಹೈಕೋರ್ಟ್‌ ದಾರಿತಪ್ಪಿಸಲಾಗಿದೆ: ರಾಜಧಾನಿಯಲ್ಲಿನ ಚರಂಡಿಗಳ ನೀರು ಮತ್ತು ಹೂಳು ತೆಗೆಯುವ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರು ಹೈಕೋರ್ಟ್‌ನ್ನು ತಪ್ಪುದಾರಿಗೆಳೆದಿದ್ದಾರೆ ಎಂದು ಆರೋಪಿಸಿದರು.

ʻಕೇಂದ್ರವು ನರೇಶ್ ಕುಮಾರ್ ಅವರಿಗೆ ದೆಹಲಿಯ ಸಿಎಸ್ ಆಗಿ ಎರಡು ವಿಸ್ತರಣೆ ನೀಡಿದೆ. ಅವರು ನಗರವನ್ನು ಹಾಳುಮಾಡುತ್ತಿದ್ದಾರೆ. ಮಾದ ರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿದ್ದ ಸಿಎಸ್‌, ಸಚಿವರು ಹೂಳು ತೆಗೆಯುವ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಲಿಖಿತ ಉತ್ತರ ನೀಡಿದ್ದರು. ದಿಲ್ಲಿಯ ಚರಂಡಿಗಳ ಹೂಳು ತೆಗೆಯುವ ಬಗ್ಗೆ ಮುಖ್ಯ ಕಾರ್ಯದರ್ಶಿ ಹೈಕೋರ್ಟ್‌ ನ ದಾರಿ ತಪ್ಪಿಸಿದ್ದಾರೆ,ʼ ಎಂದು ಆರೋಪಿಸಿದರು.

10 ಲಕ್ಷ ರೂ.ಪರಿಹಾರ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಾವಿಗೀಡಾದ ಮೂವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Read More
Next Story