Delhi CM | ದೆಹಲಿ ಸಿಎಂ ರೇಖಾ ಗುಪ್ತಾ; ಈ ಅಚ್ಚರಿ ಅಭ್ಯರ್ಥಿ ಯಾರು? ಹಿನ್ನೆಲೆ ಏನು?
x
ರೇಖಾ ಗುಪ್ತಾ

Delhi CM | ದೆಹಲಿ ಸಿಎಂ ರೇಖಾ ಗುಪ್ತಾ; ಈ ಅಚ್ಚರಿ ಅಭ್ಯರ್ಥಿ ಯಾರು? ಹಿನ್ನೆಲೆ ಏನು?

ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ರೇಖಾ ಗುಪ್ತಾ ಅವರನ್ನು ಘೋಷಿಸಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಅವರು ಗುರುವಾರ (ಫೆ.20) ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ದೆಹಲಿ ಅಧಿಕಾರದ ಚುಕ್ಕಾಣಿ ಹಿಡಿದ ನಾಲ್ಕನೇ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಅತಿಶಿ ಅವರು ಈ ಹಿಂದೆ ದೆಹಲಿ ಮುಖ್ಯಮಂತ್ರಿಗಳಾಗಿದ್ದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, 20 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ರೇಖಾ ಗುಪ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿ ರಾಜ್ಯಪಾಲ ವಿ.ಕೆ ಸಕ್ಸೆನಾ ಅವರು ಪ್ರಮಾಣ ವಚನ ಬೋಧಿಸಿದರು. ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿತ್ತು.

ಮೊದಲ ಚುನಾವಣೆಯಲ್ಲಿ ಶಾಸಕಿಯಾಗಿ, ಮುಖ್ಯಮಂತ್ರಿ ಗದ್ದುಗೆ ಏರುತ್ತಿರುವ ರೇಖಾ ಗುಪ್ತಾ ಹಿನ್ನೆಲೆಯ ಕುರಿತು ಚರ್ಚೆಗಳು ಆರಂಭವಾಗಿವೆ.

ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದರು

ಯಾರು ಈ ರೇಖಾ ಗುಪ್ತಾ?

ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಂದಗಢದಲ್ಲಿ 1974ರಲ್ಲಿ ರೇಖಾ ಗುಪ್ತಾ ಜನಿಸಿದರು. ರೇಖಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತ್ತು.

ರೇಖಾ ಗುಪ್ತಾ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ದೆಹಲಿಯಲ್ಲೇ ಪೂರೈಸಿದರು. ಕಾಲೇಜು ಶಿಕ್ಷಣದಿಂದಲೇ ಎಬಿವಿಪಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ ಸಂಘ ಪರಿವಾರದೊಂದಿಗೆ ಉತ್ತಮ ನಂಟು ಹೊಂದಿದ್ದರು. ಕಾನೂನು ಪದವಿ ಪೂರ್ಣಗೊಳಿಸಿದ ಬಳಿಕ ವಕೀಲೆಯಾಗಿ ವೃತ್ತಿ ಆರಂಭಿಸಿದ್ದರು.

ರಾಜಕೀಯ ಜೀವನ

1992ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವಾಗಲೇ ಎಬಿವಿಪಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1996 ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಕಾರ್ಯಕರ್ತೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

2007ರಲ್ಲಿ ದೆಹಲಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯೆಯಾಗಿದ್ದರು. ಅಲ್ಲಿಂದ ರೇಖಾ ಗುಪ್ತಾ ಅವರ ಸಾರ್ವಜನಿಕ ಜೀವನ ಆರಂಭವಾಯಿತು. ಸತತ ಮೂರು ಬಾರಿ ಪಾಲಿಕೆ ಸದಸ್ಯರಾಗುವ ಮೂಲಕ ಪಾಲಿಕೆಯಲ್ಲಿ ಬಿಜೆಪಿಯ ಪ್ರಾಬಲ್ಯ ಉಳಿಸಿಕೊಂಡಿದ್ದರು.

ಬಳಿಕ ದೆಹಲಿಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದರು.

ದುರ್ಬಲರಿಗಾಗಿ ಯೋಜನೆ ರೂಪಿಸಿದ್ದ ರೇಖಾ

ರೇಖಾ ಗುಪ್ತಾ ಅವರು 2012 ರಲ್ಲಿ ದೆಹಲಿಯ ಮಹಾನಗರ ಪಾಲಿಕೆ(ದಕ್ಷಿಣ) ಸದಸ್ಯೆಯಾಗಿ ಪುನರಾಯ್ಕೆಯಾದರು. ಬಳಿಕ ಮೇಯರ್ ಆಗಿ ದಕ್ಷ ಆಡಳಿತ ನೀಡಿದ್ದರು.

ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ನೆರವಾಗುವ “ಸುಮೇಧಾ ಯೋಜನೆ” ಜಾರಿಗೆ ತಂದಿದ್ದರು. ಇದರಿಂದ ಸಾಕಷ್ಟು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯವಂತಾಯಿತು. ಇದಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದರು.

Read More
Next Story