
ದೆಹಲಿ ಸ್ಫೋಟ : ಕಾರಿನ ಮಾಲೀಕ ವಶಕ್ಕೆ, ಆತ್ಮಾಹುತಿ ದಾಳಿಯ ಶಂಕೆ
ಹರಿಯಾಣ ನೋಂದಣಿ ಸಂಖ್ಯೆ ಹೊಂದಿದ್ದ ಈ ಕಾರು, ನದೀಮ್ ಖಾನ್ ಎಂಬುವವರ ಹೆಸರಿನಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಸ್ಫೋಟಗೊಂಡ ಹ್ಯುಂಡೈ ಐ20 ಕಾರಿನ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯು ಆತ್ಮಾಹುತಿ ಬಾಂಬ್ ದಾಳಿಯೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ, ಕೆಂಪು ಕೋಟೆಯ ಬಳಿಯ ಸುಭಾಷ್ ಮಾರ್ಗ್ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರಿನಲ್ಲಿ ಪ್ರಬಲ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಕನಿಷ್ಠ 9 ಜನರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಸ್ಫೋಟ ಸಂಭವಿಸಿದಾಗ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಹರಿಯಾಣ ನೋಂದಣಿ ಸಂಖ್ಯೆ ಹೊಂದಿದ್ದ ಈ ಕಾರು, ನದೀಮ್ ಖಾನ್ ಎಂಬುವವರ ಹೆಸರಿನಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಸ್ತುತ ಕಾರಿನ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆತನ ಕುರಿತ ಹೆಚ್ಚಿನ ವಿವರಗಳನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಆತ್ಮಾಹುತಿ ದಾಳಿಯ ಶಂಕೆ
ಈ ಕೃತ್ಯವು ಪೂರ್ವನಿಯೋಜಿತ ಭಯೋತ್ಪಾದಕ ದಾಳಿಯಾಗಿರಬಹುದು ಮತ್ತು ಇದು ಆತ್ಮಾಹುತಿ ದಾಳಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ರಾಷ್ಟ್ರೀಯ ಭದ್ರತಾ ಪಡೆ (NSG) ಸೇರಿದಂತೆ ಹಲವು ತನಿಖಾ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿವೆ. ಈ ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ರಾಷ್ಟ್ರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

