
ವಿಮಾನಗಳ ಹಾರಾಟವನ್ನು ಟ್ರ್ಯಾಕ್ ಮಾಡುವ ಫ್ಲೈಟ್‌ರಾಡರ್ 24 ವೆಬ್‌ಸೈಟ್ ಪ್ರಕಾರ, ಡೆಲ್‌ನಲ್ಲಿ 129 ವಿಮಾನಗಳು ವಿಳಂಬವಾಗಿವೆ.
ದೆಹಲಿ ವಿಮಾನ ನಿಲ್ದಾಣ: ತಾಂತ್ರಿಕ ದೋಷದಿಂದ 800 ವಿಮಾನಗಳ ಹಾರಾಟ ವಿಳಂಬ, ಪರಿಸ್ಥಿತಿ ಸಹಜ ಸ್ಥಿತಿಗೆ
ಸಾಮಾನ್ಯವಾಗಿ ಗಂಟೆಗೆ 60-70 ವಿಮಾನಗಳ ಹಾರಾಟವನ್ನು ನಿರ್ವಹಿಸುವ ದೆಹಲಿ ವಿಮಾನ ನಿಲ್ದಾಣದಲ್ಲಿ, ಈ ಪ್ರಕ್ರಿಯೆಯು ಕಾರ್ಯಾಚರಣೆಯ ವೇಗವನ್ನು ತೀವ್ರವಾಗಿ ಇಳಿಸಿತು.
ದೆಹಲಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ವ್ಯವಸ್ಥೆಯಲ್ಲಿ ಉಂಟಾಗಿದ್ದ ಗಂಭೀರ ತಾಂತ್ರಿಕ ದೋಷದಿಂದಾಗಿ ಸುಮಾರು 800 ವಿಮಾನಗಳ ಹಾರಾಟ ವಿಳಂಬವಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು. ಸರಿಸುಮಾರು 36 ಗಂಟೆಗಳ ನಂತರ, ಶನಿವಾರ (ನವೆಂಬರ್ 8) ಬೆಳಿಗ್ಗೆಯಿಂದ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ನವೆಂಬರ್ 6 ರ ಸಂಜೆ, ಎಟಿಸಿಯ ಪ್ರಮುಖ ವ್ಯವಸ್ಥೆಯಾದ 'ಸ್ವಯಂಚಾಲಿತ ಸಂದೇಶ ಸ್ವಿಚಿಂಗ್ ಸಿಸ್ಟಮ್' (AMSS) ನಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ವ್ಯವಸ್ಥೆಯು ವಿಮಾನಗಳ ಹಾರಾಟ ಯೋಜನೆ, ಮಾರ್ಗ, ಇಂಧನ, ಹವಾಮಾನ ಮಾಹಿತಿ ಮುಂತಾದ ನಿರ್ಣಾಯಕ ಡೇಟಾವನ್ನು ಸ್ವಯಂಚಾಲಿತವಾಗಿ ನಿಯಂತ್ರಕರಿಗೆ ಒದಗಿಸುತ್ತದೆ. AMSS ಕೈಕೊಟ್ಟಿದ್ದರಿಂದ, ಎಟಿಸಿ ಅಧಿಕಾರಿಗಳು ಪ್ರತಿ ವಿಮಾನದ ಹಾರಾಟ ಯೋಜನೆಯನ್ನು ಸಿಬ್ಬಂದಿಗಳೇ ಸಿದ್ಧಪಡಿಸಬೇಕಾಯಿತು, ಇದು ಪ್ರತಿ ವಿಮಾನಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.
ಸಾಮಾನ್ಯವಾಗಿ ಗಂಟೆಗೆ 60-70 ವಿಮಾನಗಳ ಹಾರಾಟವನ್ನು ನಿರ್ವಹಿಸುವ ದೆಹಲಿ ವಿಮಾನ ನಿಲ್ದಾಣದಲ್ಲಿ, ಈ ಪ್ರಕ್ರಿಯೆಯು ಕಾರ್ಯಾಚರಣೆಯ ವೇಗವನ್ನು ತೀವ್ರವಾಗಿ ಇಳಿಸಿತು . ಇದು ವಿಮಾನಗಳ ನಿರ್ಗಮನ ಮತ್ತು ಆಗಮನದಲ್ಲಿ ಗಂಟೆಗಳ ಕಾಲ ವಿಳಂಬಕ್ಕೆ ಕಾರಣವಾಯಿತು.
ಪ್ರಯಾಣಿಕರ ಪರದಾಟ
ಶುಕ್ರವಾರದಂದು, ದೆಹಲಿ ವಿಮಾನ ನಿಲ್ದಾಣವು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು. ಸಾವಿರಾರು ಪ್ರಯಾಣಿಕರು ತಮ್ಮ ವಿಮಾನಗಳಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರು. ವಿಮಾನ ಹತ್ತಿದ ನಂತರವೂ ಟೇಕ್‌ಆಫ್‌ಗಾಗಿ ಬಹಳ ಹೊತ್ತು ಕಾಯಬೇಕಾಯಿತು ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಸೀಮಿತ ಪಾರ್ಕಿಂಗ್ ಬೇಗಳು ಮತ್ತು ವಾಯುಪ್ರದೇಶದ ದಟ್ಟಣೆಯಿಂದಾಗಿ ಆಗಮಿಸುವ ವಿಮಾನಗಳು ಕೂಡ ವಿಳಂಬಗೊಂಡವು.
ಸಹಜ ಸ್ಥಿತಿಯತ್ತ ಕಾರ್ಯಾಚರಣೆ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI), ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ನ ತಂತ್ರಜ್ಞರು ಮತ್ತು ಮೂಲ ಉಪಕರಣ ತಯಾರಕರ (OEM) ಬೆಂಬಲದೊಂದಿಗೆ ವ್ಯವಸ್ಥೆಯನ್ನು ಸರಿಪಡಿಸಲು ಹಗಲಿರುಳು ಶ್ರಮಿಸಿದರು. ಶನಿವಾರ ಬೆಳಿಗ್ಗೆ, ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಲಹೆಯೊಂದನ್ನು ನೀಡಿ, "ತಾಂತ್ರಿಕ ದೋಷವು ಕ್ರಮೇಣ ಸುಧಾರಿಸುತ್ತಿದೆ ಮತ್ತು ವಿಮಾನ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳುತ್ತಿವೆ" ಎಂದು ಹೇಳಿದೆ.
ವಿಮಾನಗಳ ಇತ್ತೀಚಿನ ಮಾಹಿತಿಗಾಗಿ ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. Flightradar24 ವೆಬ್‌ಸೈಟ್ ಪ್ರಕಾರ, ಶನಿವಾರದಂದು 129 ವಿಮಾನಗಳು (76 ನಿರ್ಗಮನ ಮತ್ತು 53 ಆಗಮನ) ವಿಳಂಬವಾಗಿವೆ. ನಿರ್ಗಮನ ವಿಳಂಬವು ಸರಾಸರಿ 19 ನಿಮಿಷಗಳಷ್ಟಿದ್ದರೆ, ಆಗಮನ ವಿಳಂಬವು ಸುಮಾರು 5 ನಿಮಿಷಗಳಿಗೆ ಇಳಿದಿದೆ. ವಿಮಾನಗಳ ಸುರಕ್ಷತೆಗೆ ಯಾವುದೇ ಹಂತದಲ್ಲೂ ಧಕ್ಕೆಯಾಗಿಲ್ಲ ಎಂದು ಎಎಐ ಭರವಸೆ ನೀಡಿದೆ.

