
ದೆಹಲಿಯ ಎಂಟು ಕೇಂದ್ರಗಳಲ್ಲಿ ವಾಯುಮಾಲಿನ್ಯ ಹೆಚ್ಚಳ
ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ವಾಯುಮಾಲಿನ್ಯ ಗಣನೀಯವಾಗಿ ಹೆಚ್ಚಳ ಕಂಡಿದೆ. ಎಂಟು ಮೇಲ್ವಿಚಾರಣಾ ಕೇಂದ್ರಗಳು ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ' ಎಂದು ದಾಖಲಿಸಿದೆ.
ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ವಾಯುಮಾಲಿನ್ಯ ಗಣನೀಯವಾಗಿ ಹೆಚ್ಚಳ ಕಂಡಿದೆ. ಎಂಟು ಮೇಲ್ವಿಚಾರಣಾ ಕೇಂದ್ರಗಳು ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ' ಎಂದು ದಾಖಲಿಸಿದೆ. ಬೆಳಿಗ್ಗೆ 9ರ ವೇಳೆಗೆ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 278 ದಾಖಲಾಗಿದೆ. ಉತ್ತಮ ಹವಾಮಾನದ ಪರಿಸ್ಥಿತಿಯಿಂದಾಗಿ ಮಂಗಳವಾರ ಗಾಳಿಯ ಗುಣಮಟ್ಟ ತುಸು ಸುಧಾರಿಸಿದ್ದು, ಎಐಕ್ಯೂ 304ರಿಂದ 268ಕ್ಕೆ ಇಳಿದಿತ್ತು.
ಗಾಳಿಯ ಗುಣಮಟ್ಟದ ಸೂಚ್ಯಂಕ ಸೊನ್ನೆ ಮತ್ತು 50 ರ ನಡುವಿನ ಇದ್ದರೆ ʻಉತ್ತಮ, 51 ರಿಂದ 100 ನಡುವೆ ಇದ್ದರೆ 'ತೃಪ್ತಿದಾಯಕ', 101 ರಿಂದ 200 ನಡುವೆ ಇದ್ದರೆ 'ಮಧ್ಯಮ,' 201 ರಿಂದ 300 ನಡುವೆ ಇದ್ದರೆ 'ಕಳಪೆ,' 301 ರಿಂದ 400 'ಅತ್ಯಂತ ಕಳಪೆ,' ಮತ್ತು 401 ರಿಂದ 500 ಹೆಚ್ಚಾದರೆ ತೀವ್ರ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
36 ವಾಯುಮಾಲಿನ್ಯ ಪರಿವೀಕ್ಷಣಾ ಕೇಂದ್ರಗಳ ಪೈಕಿ ಆನಂದ್ ವಿಹಾರ್, ಅಶೋಕ್ ವಿಹಾರ್, ಅಯಾ ನಗರ, ಬವಾನಾ, ಜಹಾಂಗೀರ್ಪುರಿ, ಮುಂಡ್ಯಾ, ವಿವೇಕ್ ವಿಹಾರ್ ಮತ್ತು ವಜೀರ್ಪುರ್ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ದಾಖಲಾಗಿದೆ' ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶಗಳು ತಿಳಿಸಿವೆ.