
ದೆಹಲಿ ವಾಯು ಮಾಲಿನ್ಯ: ಶುದ್ಧ ಗಾಳಿಗಾಗಿ ಪ್ರತಿಭಟನೆ, ಹಲವರು ವಶಕ್ಕೆ, ಸರ್ಕಾರದ ವಿರುದ್ಧ ಹೆಚ್ಚಿದ ಆಕ್ರೋಶ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪರಿಸರ ಕಾರ್ಯಕರ್ತರು ಮತ್ತು ಪೋಷಕರು, ಕೇಂದ್ರ ಹಾಗೂ ದೆಹಲಿ ಸರ್ಕಾರಗಳ " ಸ್ಥಿತಿಯನ್ನು ಟೀಕಿಸಿದರು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) "ಅತ್ಯಂತ ಕಳಪೆ" ಮಟ್ಟವಾದ 370ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ತುರ್ತು ಕ್ರಮಕ್ಕೆ ಆಗ್ರಹಿಸಿ ನೂರಾರು ನಾಗರಿಕರು, ಮಕ್ಕಳು ಮತ್ತು ಪರಿಸರ ಕಾರ್ಯಕರ್ತರು ಭಾನುವಾರ ಇಂಡಿಯಾ ಗೇಟ್ ಬಳಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ವೇಳೆ ದೆಹಲಿ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದು, ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
"ಹೊಗೆಯಿಂದ ಸ್ವಾತಂತ್ರ್ಯ" (Smog se Azadi) ಮತ್ತು "ಉಸಿರಾಟವೇ ನನ್ನನ್ನು ಕೊಲ್ಲುತ್ತಿದೆ" (Breathing is killing me) ಎಂಬಂತಹ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ನಾಗರಿಕರು, ಹದಗೆಡುತ್ತಿರುವ ವಾಯು ಮಾಲಿನ್ಯ ಮತ್ತು ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಕಿಡಿಕಾರಿದರು.
ಸರ್ಕಾರದ ವಿರುದ್ಧ ಜನರ ಆಕ್ರೋಶ
"ಇದು ಆರೋಗ್ಯ ತುರ್ತುಸ್ಥಿತಿ, ಪರಸ್ಪರ ದೂಷಿಸುವ ಆಟವಲ್ಲ. ಸರ್ಕಾರದ ಪ್ರಯೋಗಗಳು ನಮ್ಮ ಮಕ್ಕಳನ್ನು ವಿಫಲಗೊಳಿಸಿವೆ. ಸರ್ಕಾರವು ಈಗಲೇ ಶುದ್ಧ ಗಾಳಿಯ ನೀತಿಯನ್ನು ಜಾರಿಗೆ ತರಬೇಕು," ಎಂದು ಪ್ರತಿಭಟನಾಕಾರರೊಬ್ಬರು ಆಗ್ರಹಿಸಿದರು. ಶ್ರೀಮಂತರು ಶುದ್ಧೀಕರಣ ಯಂತ್ರಗಳನ್ನು ಖರೀದಿಸಬಹುದು ಅಥವಾ ಬೆಟ್ಟಗಳಿಗೆ ಹೋಗಬಹುದು, ಆದರೆ ನಮ್ಮಂತಹ ಸಾಮಾನ್ಯರು ಪ್ರತಿ ಚಳಿಗಾಲದಲ್ಲೂ ಉಸಿರಾಡಲು ಹೋರಾಡಬೇಕಾಗಿದೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪರಿಸರ ಕಾರ್ಯಕರ್ತರು ಮತ್ತು ಪೋಷಕರು, ಕೇಂದ್ರ ಹಾಗೂ ದೆಹಲಿ ಸರ್ಕಾರಗಳ " ಸ್ಥಿತಿಯನ್ನು ಟೀಕಿಸಿದರು. ಬೀದಿ ಬದಿ ವ್ಯಾಪಾರಿಗಳು ಮತ್ತು ಆಟೋ ಚಾಲಕರಂತಹ ಬಡ ನಾಗರಿಕರು ವಾಹನಗಳ ಹೊಗೆಯಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ಪ್ರತಿಭಟನಾಕಾರರಾದ ಆರೋಪಿಸಿದರು.
ಕೆಲವು ಪ್ರತಿಭಟನಾಕಾರರು ಅಧಿಕೃತ ವಾಯು ಗುಣಮಟ್ಟ ಸೂಚ್ಯಂಕದ (AQI) ದತ್ತಾಂಶದ ಸತ್ಯಾಸತ್ಯತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರು. "ಮಾಲಿನ್ಯ ಹೆಚ್ಚಾದಾಗಲೆಲ್ಲಾ ಮಾನಿಟರಿಂಗ್ ಸ್ಟೇಷನ್‌ಗಳ ಬಳಿ ನೀರು ಸಿಂಪಡಿಸುವುದನ್ನು ನಾನು ನೋಡಿದ್ದೇನೆ. ಈ ದತ್ತಾಂಶವಾದರೂ ಸಮರ್ಪಕವೇ?" ಎಂದು ಪ್ರೇರಣಾ ಮೆಹ್ರಾ ಎಂಬುವವರು ಪ್ರಶ್ನಿಸಿದ್ದಾರೆ.
ಶಾಂತಿಯುತ ಪ್ರತಿಭಟನೆಗೂ ತಡೆ, ರಾಹುಲ್ ಗಾಂಧಿ ಖಂಡನೆ
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಹಲವು ಪ್ರತಿಭಟನಾಕಾರರನ್ನು, ಮಕ್ಕಳನ್ನೂ ಒಳಗೊಂಡಂತೆ, ವಶಕ್ಕೆ ಪಡೆದಿದ್ದಾರೆ. ಇಂಡಿಯಾ ಗೇಟ್ ಬಳಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸುವ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಅನ್ನು ಉಲ್ಲೇಖಿಸಿ, "ಮುಂಜಾಗ್ರತಾ ಕ್ರಮವಾಗಿ" ಬಂಧಿಸಲಾಗಿದೆ ಎಂದು ಡಿಸಿಪಿ ದೇವೇಶ್ ಕುಮಾರ್ ಮಹ್ಲಾ ತಿಳಿಸಿದರು.
ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪರಿಸರ ಕಾರ್ಯಕರ್ತ ವಿಮ್ಲೇಂದು ಝಾ, "ದೆಹಲಿಯ ಕೆಲವು ಭಾಗಗಳಲ್ಲಿ ಖಾಸಗಿ ಮಾನಿಟರ್‌ಗಳು 999ಕ್ಕೂ ಅಧಿಕ AQI ತೋರಿಸುತ್ತಿವೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ. ನಾಗರಿಕರು ಕೇವಲ ತಮ್ಮ ಉಸಿರಾಟದ ಹಕ್ಕನ್ನು ಕೇಳುತ್ತಿದ್ದಾರೆ," ಎಂದು ಕಿಡಿಕಾರಿದ್ದಾರೆ.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. "ಶುದ್ಧ ಗಾಳಿಗಾಗಿ ಶಾಂತಿಯುತವಾಗಿ ಆಗ್ರಹಿಸುತ್ತಿರುವ ನಾಗರಿಕರನ್ನು ಅಪರಾಧಿಗಳಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ? ಶುದ್ಧ ಗಾಳಿಯ ಹಕ್ಕು ಮೂಲಭೂತ ಮಾನವ ಹಕ್ಕು, ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ನಮ್ಮ ಸಂವಿಧಾನ ಖಾತರಿಪಡಿಸಿದೆ," ಎಂದು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
ರಾಜಕೀಯ ಕೆಸರೆರಚಾಟ
ಈ ಮಧ್ಯೆ, ದೆಹಲಿ ಆಪ್ ಮುಖ್ಯಸ್ಥ ಸೌರಭ್ ಭಾರದ್ವಾಜ್, ಇದು "ರಾಜಕೀಯ ರಹಿತ" ಪ್ರತಿಭಟನೆ ಎಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗಳು ತಮ್ಮ ನಿಷ್ಕ್ರಿಯತೆಯನ್ನು ಮರೆಮಾಚಲು "ದತ್ತಾಂಶವನ್ನು ತಿರುಚುತ್ತಿವೆ" ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿರ್ಸಾ, ಆಪ್‌ನ ದಶಕಗಳ ಆಡಳಿತವೇ ಈ ಬಿಕ್ಕಟ್ಟಿಗೆ ಕಾರಣ ಎಂದು ದೂಷಿಸಿದ್ದಾರೆ.

