ಮಾನನಷ್ಟ ಮೊಕದ್ದಮೆ: ಕೇಜ್ರಿವಾಲ್ ಅರ್ಜಿ ವಿಚಾರಣೆ  6 ವಾರ  ಮುಂದಕ್ಕೆ
x

ಮಾನನಷ್ಟ ಮೊಕದ್ದಮೆ: ಕೇಜ್ರಿವಾಲ್ ಅರ್ಜಿ ವಿಚಾರಣೆ 6 ವಾರ ಮುಂದಕ್ಕೆ

ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದ ಮಾನಹಾನಿಕರ ವಿಡಿಯೋವನ್ನು ಮರುಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದ್ದೇನೆ ಎಂದು ಕೇಜ್ರಿವಾಲ್ ಫೆ.26 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು


ಹೊಸದಿಲ್ಲಿ: ಮಾನಹಾನಿಕರ ವಿಡಿಯೋ ಮರುಟ್ವೀಟ್ ಮಾಡಿದ್ದಕ್ಕೆ ತನಗೆ ನೀಡಿದ್ದ ಸಮನ್ಸ್ ಎತ್ತಿ ಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಆರು ವಾರ ಮುಂದೂಡಿದೆ.

2018 ರಲ್ಲಿ ಯುಟ್ಯೂಬರ್ ಧ್ರುವ ರಾಥೀ ಅವರ ವಿಡಿಯೋವನ್ನು ಕೇಜ್ರಿವಾಲ್‌ ಮರುಟ್ವೀಟ್‌ ಮಾಡಿದ್ದು,ಅವರ ಮೇಲೆ ‌ಕ್ರಿಮಿನಲ್ ಮಾನಹಾನಿ ಮೊಕದ್ದಮೆ ದಾಖಲಿಸಲಾಗಿದೆ.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಇತ್ಯರ್ಥಕ್ಕೆ ಸ್ವಲ್ಪ ಸಮಯಾವಕಾಶ ಕೋರಿದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸಂಜಯ್ ಕುಮಾರ್ ಮತ್ತು ಆರ್. ಮಹದೇವನ್ ಅವರ ಪೀಠವು ವಿಚಾರಣೆಯನ್ನು ಆರು ವಾರ ಕಾಲ ಮುಂದೂಡಿತು.

ʻಇತ್ಯರ್ಥಕ್ಕೆ ಇನ್ನೂ ಸ್ವಲ್ಪ ಸಮಯ ನೀಡಬಹುದು. ಪ್ರಸ್ತುತ ಕೇಜ್ರಿವಾಲ್‌ ಜೀವನದಲ್ಲಿ ಹಲವು ವಿಷಯಗಳು ನಡೆಯುತ್ತಿವೆ,ʼ ಎಂದು ಸಿಂಘ್ವಿ ಹೇಳಿದರು.

ದೂರುದಾರರ ಪರ ವಾದ ಮಂಡಿಸಿದ ವಕೀಲ ರಾಘವ್ ಅವಸ್ಥಿ, ಸಮಯಾವಕಾಶ ನೀಡಬಹುದು. ಆದರೆ, ಇದು ಅನಿಯಮಿತ ಆಗಿರಬಾರದು ಮತ್ತು ಮಾತುಕತೆ ನಡೆಯಬೇಕು ಎಂದರು.

ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದ ಅವಹೇಳನಕಾರಿ ವೀಡಿಯೊವನ್ನು ಮರುಟ್ವೀಟ್‌ ಮಾಡಿರುವುದು ತಪ್ಪು ಎಂದು ಕೇಜ್ರಿವಾಲ್ ಫೆ. 26ರಂದು ಒಪ್ಪಿಕೊಂಡಿದ್ದಾರೆ. ಎಕ್ಸ್ ಅಥವಾ ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೇಜ್ರಿವಾಲ್ ಕ್ಷಮೆಯಾಚಿಸಬಹುದು ಎಂದು ದೂರುದಾರ ವಿಕಾಸ್ ಸಾಂಕೃತ್ಯಾಯನ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

'ಬಿಜೆಪಿ ಐಟಿ ಸೆಲ್ ಭಾಗ 2' ಶೀರ್ಷಿಕೆಯ ಯುಟ್ಯೂಬ್ ವಿಡಿಯೋವನ್ನು ಧ್ರುವ ರಾಥಿ ಅವರು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಹಲವಾರು ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ಸಾಂಕೃತ್ಯಾಯನ ಹೇಳಿಕೊಂಡಿದ್ದಾರೆ.

Read More
Next Story