
ವಾಯುಭಾರ ಕುಸಿತ | ಅಸ್ನಾ ಚಂಡಮಾರುತ ಪರಿಣಾಮ: ಗುಜರಾತ್ ಪ್ರವಾಹ ಮುನ್ನೆಚ್ಚರಿಕೆ
ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತದಿಂದಾಗಿ ಗುಜರಾತಿನ ಕಛ್ ಕರಾವಳಿಯಲ್ಲಿ ಅಸ್ನಾ ಚಂಡಮಾರುತ ಕಾಣಿಸಿಕೊಂಡಿದ್ದು, ಅದರಿಂದಾಗಿ ಶುಕ್ರವಾರ ಗುಜರಾತ್‌ನಲ್ಲಿ ಧಾರಾಕಾರ ಮಳೆ ಮತ್ತು ಭಾರೀ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.
1976ರ ನಂತರ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ಮೊದಲ ಚಂಡಮಾರುತ ಇದಾಗಿದೆ. ಅಸ್ನಾ ಎಂಬ ಹೆಸರನ್ನು ಪಾಕಿಸ್ತಾನ ನೀಡಿದೆ. ಐಎಂಡಿ ಪ್ರಕಾರ, 1891 ಮತ್ತು 2023 ರ ನಡುವೆ 1976, 1964 ಮತ್ತು 1944 ರಲ್ಲಿ ಅರಬ್ಬಿ ಸಮುದ್ರದಲ್ಲಿ ಕೇವಲ ಮೂರು ಚಂಡಮಾರುತಗಳು ರೂಪುಗೊಂಡವು.
1944 ರ ಚಂಡಮಾರುತವು ದುರ್ಬಲಗೊಳ್ಳುವ ಮೊದಲು ಅರಬ್ಬಿ ಸಮುದ್ರಕ್ಕೆ ನುಗ್ಗಿದ ನಂತರ ತೀವ್ರಗೊಂಡಿತು. 1964 ರಲ್ಲಿ ಮತ್ತೊಂದು ಚಂಡಮಾರುತವು ದಕ್ಷಿಣ ಗುಜರಾತ್ ಕರಾವಳಿಯ ಬಳಿ ಸೃಷ್ಟಿಯಾಗಿ, ಕರಾವಳಿ ಬಳಿ ದುರ್ಬಲಗೊಂಡಿತು. 1976 ರ ಚಂಡಮಾರುತವು ಒಡಿಶಾದಲ್ಲಿ ಹುಟ್ಟಿಕೊಂಡು, ಪಶ್ಚಿಮ ವಾಯವ್ಯಕ್ಕೆ ಚಲಿಸಿ, ಅರಬ್ಬಿ ಸಮುದ್ರವನ್ನು ಪ್ರವೇಶಿಸಿತು. ಓಮನ್ ಕರಾವಳಿಯ ಬಳಿ ವಾಯವ್ಯ ಅರೇಬಿಯನ್ ಸಮುದ್ರದ ಮೇಲೆ ದುರ್ಬಲಗೊಂಡಿತು.
ಕಛ್ ಕರಾವಳಿ, ಪಾಕಿಸ್ತಾನ ಮತ್ತು ಈಶಾನ್ಯ ಅರೇಬಿಯನ್ ಸಮುದ್ರದ ಪಕ್ಕದ ಪ್ರದೇಶಗಳಲ್ಲಿ ಕುಸಿತದಿಂದ ಚಂಡಮಾರುತ ಕಳೆದ 6 ಗಂಟೆಗಳಲ್ಲಿ 6 ಕಿಮೀ ವೇಗದಲ್ಲಿ ಪಶ್ಚಿಮಕ್ಕೆ ಚಲಿಸಿ, ಚಂಡಮಾರುತ 'ಅಸ್ನಾ' ಆಯಿತು. ಮುಂದಿನ ಎರಡು ದಿನಗಳಲ್ಲಿ ದೇಶದ ಕರಾವಳಿಯಿಂದ ದೂರವಿರುವ ಈಶಾನ್ಯ ಅರೇಬಿಯನ್ ಸಮುದ್ರದ ಮೇಲೆ ಪಶ್ಚಿಮ ವಾಯವ್ಯದ ಕಡೆಗೆ ಚಲಿಸುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕುಸಿತವು ಕಡಿಮೆ ಒತ್ತಡದ ವ್ಯವಸ್ಥೆಯಾಗಿದ್ದು, ಗಾಳಿಯ ವೇಗ ಗಂಟೆಗೆ 52 ರಿಂದ 61 ಕಿಮೀ ಇರುತ್ತದೆ. ಆದರೆ ಚಂಡಮಾರುತದ ವೇಗ ಗಂಟೆಗೆ 63 ರಿಂದ 87 ಕಿಮೀ ಇರುತ್ತದೆ. ಕಡಿಮೆ ಒತ್ತಡದ ವ್ಯವಸ್ಥೆಯು ಚಂಡಮಾರುತವಾಗಿ ಬದಲಾಗಲು 27 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚು ಸಮುದ್ರದ ಮೇಲ್ಮೈ ತಾಪಮಾನ ಅಗತ್ಯವಿದೆ. ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಸಮುದ್ರದ ಮೇಲ್ಮೈ ತಾಪಮಾನ 28-30 ಡಿಗ್ರಿ ಸೆಲ್ಸಿಯಸ್ ಹಾಗೂ ಅರಬ್ಬಿ ಸಮುದ್ರದಲ್ಲಿ ಸುಮಾರು 27-28 ಡಿಗ್ರಿ ಸೆಲ್ಸಿಯಸ್ ಇದೆ. ಅರೇಬಿಯನ್ ಸಮುದ್ರದಲ್ಲಿನ ತಂಪಾದ ನೀರಿನಿಂದ ಹೆಚ್ಚು ತೀವ್ರಗೊಳ್ಳುವ ಸಾಧ್ಯತೆಯಿಲ್ಲ ಎಂದು ಐಎಂಡಿ ಹೇಳಿದೆ.
ಮಳೆ ಅನಾಹುತಕ್ಕೆ 26 ಸಾವು
ಗುಜರಾತಿನಲ್ಲಿ ಕಳೆದ ಐದು ದಿನಗಳಲ್ಲಿ ಮಳೆಯಿಂದಾಗಿ 26 ಮಂದಿ ಸಾವು ಕಂಡಿದ್ದಾರೆ. 18,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 1,200 ಜನರನ್ನು ರಕ್ಷಿಸಲಾಗಿದೆ. ಭದ್ರತಾ ಪಡೆಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಿದವು ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.
ವಿಶ್ವಾಮಿತ್ರಿ ನದಿಯ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ 37 ಅಡಿಯಿಂದ 32 ಅಡಿಗಳಿಗೆ ಇಳಿದಿದೆ. ಮಳೆಯಿಂದ ಹೆಚ್ಚು ಹಾನಿಗೊಳಗಾದ ವಡೋದರಾ ನಗರ ಸ್ವಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದರೂ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆ ಮತ್ತು ಅಜ್ವಾ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರಿಂದ, ಮಂಗಳವಾರ ಬೆಳಗ್ಗೆ ನದಿ ಅಪಾಯದ ಮಟ್ಟ 25 ಅಡಿ ದಾಟಿತ್ತು.