ಶವಸಂಸ್ಕಾರಕ್ಕೆ ಮೊದಲು ಎದ್ದು ಕುಳಿತ ಯುವಕ ; ಸತ್ತಿದ್ದಾನೆಂದು ಘೋಷಿಸಿದ 3 ವೈದ್ಯರು ಅಮಾನತು
ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದೆ. ಕಳೆದ ವಾರ ತಮಿಳುನಾಡಿನ ತಿರುಚ್ಚಿಯಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಶವ ಸಂಸ್ಕಾರಕ್ಕೆ ಮೊದಲು 60 ವರ್ಷದ ಮಹಿಳೆ ಎದ್ದು ಕುಳಿತಿದ್ದರು.
ಸತ್ತಿದ್ದಾರೆಂದು ಘೋಷಿಸಿದ ವ್ಯಕ್ತಿಗಳು ಶವ ಸಂಸ್ಕಾರಕ್ಕೆ ಮೊದಲು ಎದ್ದು ಕುಳಿತುಕೊಳ್ಳುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಇಂಥ ಎರಡು ಪ್ರಕರಣ ನಡೆದಿದೆ. ಈ ಬಾರಿ ರಾಜಸ್ಥಾನದಲ್ಲಿ ಘಟನೆ ನಡೆದಿದ್ದು ಯುವಕನೊಬ್ಬ ಸಂಸ್ಕಾರ ಮಾಡುವ ಮೊದಲು ನಿದ್ದೆಯಿಂದ ಎದ್ದು ಕುಳಿತುಕೊಳ್ಳುವ ರೀತಿ ಕಣ್ಣು ಬಿಟ್ಟಾಗ ಸುತ್ತಲಿದ್ದವರು ಗಾಬರಿ ಬಿದ್ದಿದ್ದಾರೆ. ವಿಷಯ ಜಿಲ್ಲಾಧಿಕಾರಿಗೆ ತಲುಪಿದ ಬಳಿಕ ಡೆತ್ ಸರ್ಟಿಫಿಕೇಟ್ ಕೊಟ್ಟಿರುವ ಮೂವರು ವೈದ್ಯರನ್ನು ಅಮಾನತು ಮಾಡಲಾಗಿದೆ.
ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ವೈದ್ಯರು ಮೃತಪಟ್ಟಿದ್ದಾನೆ ಎಂದು ಘೋಷಿಸಿದ 25 ವರ್ಷದ ಅಂಧ ರೋಹಿತಾಶ್ ಕುಮಾರ್ ಎಂಬಾತನ ಅಂತ್ಯಕ್ರಿಯೆಗೆ ಅವರ ಕುಟುಂಬ ಯೋಜನೆ ಹಾಕಿತ್ತು. ಆದರೆ, ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಆತ ಎಚ್ಚರಗೊಂಡಿದ್ದ.
ಅನಾಥನಾಗಿದ್ದ ಆತ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದ.ಗುರುವಾರ (ನವೆಂಬರ್ 21) ಆರೋಗ್ಯ ಹದಗೆಟ್ಟ ನಂತರ ಜುಂಜುನುವಿನ ಆಸ್ಪತ್ರೆಯ ತುರ್ತು ವಾರ್ಡ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಧ್ಯಾಹ್ನ 2 ಗಂಟೆಗೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು, ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಶವಾಗಾರಕ್ಕೆ ಸಾಗಿಸಿದ್ದರು.
ಆಶ್ರಯ ಮನೆಯವರು ಮೃತದೇಹ ಕೊಂಡೊಯ್ದು ಚಿತೆಯ ಮೇಲೆ ಇರಿಸುತ್ತಿದ್ದಂತೆ ಕುಮಾರ್ ಇದ್ದಕ್ಕಿದ್ದಂತೆ ಉಸಿರಾಡಲು ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಆಂಬ್ಯುಲೆನ್ಸ್ ಕರೆಸಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿದುಬಂತು. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಆತನ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ವೈದ್ಯರ ಅಮಾನತು
ಜುಂಜುನು ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಅವರು ನಿರ್ಲಕ್ಷ್ಯದ ಆರೋಪದ ಮೇಲೆ ಡಾ.ಯೋಗೇಶ್ ಜಖರ್, ಡಾ.ನವನೀತ್ ಮೀಲ್ ಮತ್ತು ಪಿಎಂಒ ಡಾ.ಸಂದೀಪ್ ಪಚಾರ್ ಎಂಬುವರನ್ನು ಗುರುವಾರ ರಾತ್ರಿ ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ವೈದ್ಯಕೀಯ ಇಲಾಖೆಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ ಎಂದು ಮೀನಾ ಹೇಳಿದ್ದಾರೆ .
ತಮಿಳುನಾಡಿನಲ್ಲಿ ಏನಾಗಿತ್ತು?
ತಮಿಳುನಾಡಿನ ತಿರುಚ್ಚಿಯಲ್ಲಿ 60 ವರ್ಷದ ಮಹಿಳೆಯೊಬ್ಬರು ಇದೇ ರೀತಿ ಎದ್ದು ಕುಳಿತಿದ್ದರು. ಅವರು ಸತ್ತಿದ್ದಾರೆಂದು ತೀರ್ಮಾನಿಸಿ ಅವರನ್ನು ಸಂಬಂಧಿಕರು ಸಮಾಧಿ ಮಾಡಲು ಸ್ಮಶಾನಕ್ಕೆ ಕರೆದೊಯ್ದರು. ಅದೃಷ್ಟವಶಾತ್, ತನ್ನ ಅಂತಿಮ ವಿಧಿಗಳನ್ನು ನೆರವೇರಿಸುವ ಕೆಲವೇ ಕ್ಷಣಗಳ ಮೊದಲು ಅವರು ಎಚ್ಚರಗೊಂಡಿದ್ದರು.
ಮರುಂಗಪುರಿ ಬಳಿಯ ಸುರಕೈಪಟ್ಟಿಯ ಪಿ ಚಿನ್ನಮ್ಮಾಳ್ ಎಂಬುವು ನವೆಂಬರ್ 16ರಂದು ಕೀಟನಾಶಕ ಸೇವಿಸಿ ಚಿಕಿತ್ಸೆಗಾಗಿ ಮನಪ್ಪರೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಕುಟುಂಬ ಸದಸ್ಯರು ಮನೆಗೆ ಕರೆತಂದಿದ್ದರು.
ಅವರು ಸತ್ತಿದ್ದಾರೆಂದು ನಂಬಿದ ಅವಳ ಸಂಬಂಧಿಕರು ಅವಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿ ಸ್ಮಶಾನಕ್ಕೆ ಕರೆತಂದಿದ್ದರು.
ಅಂತಿಮ ವಿಧಿಗಳು ಪ್ರಾರಂಭವಾಗುತ್ತಿದ್ದಂತೆ, ಚಿನ್ನಮ್ಮಾಳ್ ಕಣ್ಣು ತೆರೆದಿದ್ದರು. ತಕ್ಷಣವೇ ಅವರ ಸಂಬಂಧಿಕರು ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ತಿರುಚ್ಚಿಯ ಆಸ್ಪತ್ರೆಗೆ ಕರೆದೊಯ್ದಿದ್ದರು.