
ಹೆದ್ದಾರಿಗಳಲ್ಲಿ ಓಡುವ ಸಾವಿನ ದೂತರು: ದಶಕದಲ್ಲಿ ನೂರಾರು ಜೀವ ಬಲಿ ಪಡೆದ ಬಸ್ ಅಗ್ನಿ ದುರಂತಗಳು
ಕಳೆದ ಹತ್ತು ವರ್ಷಗಳಲ್ಲಿ, ವಿಶೇಷವಾಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಸಂಭವಿಸಿದ ಅಗ್ನಿ ದುರಂತಗಳಲ್ಲಿ 100ಕ್ಕೂ ಹೆಚ್ಚು ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಬಳಿ ಹೈದರಾಬಾದ್-ಬೆಂಗಳೂರು ಬಸ್ ಬೆಂಕಿಗಾಹುತಿಯಾಗಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ, ದೇಶದ ಹೆದ್ದಾರಿಗಳಲ್ಲಿನ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಇದು ಕೇವಲ ಒಂದು ದುರಂತವಲ್ಲ, ಬದಲಿಗೆ ಕಳೆದ ಒಂದು ದಶಕದಲ್ಲಿ ಭಾರತದಾದ್ಯಂತ ಮರುಕಳಿಸುತ್ತಿರುವ ಭೀಕರ ದುರಂತಗಳ ಸರಮಾಲೆಯ ಮುಂದುವರಿದ ಭಾಗ.
ಕಳೆದ ಹತ್ತು ವರ್ಷಗಳಲ್ಲಿ, ವಿಶೇಷವಾಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಸಂಭವಿಸಿದ ಅಗ್ನಿ ದುರಂತಗಳಲ್ಲಿ 100ಕ್ಕೂ ಹೆಚ್ಚು ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಗಳ ಹಿಂದಿನ ಕಾರಣಗಳನ್ನು ಕೆದಕಿದರೆ, ಬಹುತೇಕ ಪ್ರಕರಣಗಳಲ್ಲಿ ಡಿಕ್ಕಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಮತ್ತು ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆ ಎದ್ದು ಕಾಣುತ್ತದೆ.
ದೇಶವನ್ನು ಬೆಚ್ಚಿಬೀಳಿಸಿದ ಘಟನೆಗಳು
ಕರ್ನೂಲ್, ಆಂಧ್ರಪ್ರದೇಶ (ಅಕ್ಟೋಬರ್ 2025): ಶುಕ್ರವಾರ ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್, μοಟರ್‌ಸೈಕಲ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದು 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.
ಜೈಸಲ್ಮೇರ್, ರಾಜಸ್ಥಾನ (ಅಕ್ಟೋಬರ್ 2025): ಜೈಸಲ್ಮೇರ್-ಜೋಧ್‌ಪುರ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಹವಾನಿಯಂತ್ರಿತ ಬಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು 22 ಮಂದಿ ಸುಟ್ಟು ಕರಕಲಾಗಿದ್ದರು.
ಬುಲ್ಢಾಣ, ಮಹಾರಾಷ್ಟ್ರ (ಜುಲೈ 2023): ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕ ಮತ್ತು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡು 25 ಮಂದಿ ನಿದ್ರೆಯಲ್ಲೇ ಮೃತಪಟ್ಟಿದ್ದರು.
ಹುಬ್ಬಳ್ಳಿ, ಕರ್ನಾಟಕ (ನವೆಂಬರ್ 2023): ಹುಬ್ಬಳ್ಳಿ ಬಳಿ ಸ್ಲೀಪರ್ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪರಿಣಾಮ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು.
ನವ್ಸಾರಿ, ಗುಜರಾತ್ (ಜೂನ್ 2022): ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಜನರು ದರ್ಮರಣಕ್ಕೆ ಈಡಾಗಿದ್ದರು.
ಸುರಕ್ಷತೆಯ ಸವಾಲು
ಈ ಹೆಚ್ಚಿನ ದುರಂತಗಳು ನಡೆಯಲು ಕೆಲವು ಸಾಮಾನ್ಯ ಕಾರಣಗಳಿವೆ. ಡಿಕ್ಕಿಯಾದಾಗ ಇಂಧನ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಳ್ಳುವುದು, ಎಸಿ ಬಸ್‌ಗಳಲ್ಲಿನ ಶಾರ್ಟ್ ಸರ್ಕ್ಯೂಟ್, ಮತ್ತು ಅಪಾಯದ ಸಮಯದಲ್ಲಿ ತಪ್ಪಿಸಿಕೊಳ್ಳಲು ಸೂಕ್ತ ತುರ್ತು ನಿರ್ಗಮನ ದ್ವಾರಗಳಿಲ್ಲದಿರುವುದು ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. 2013ರ ಅಕ್ಟೋಬರ್ 29ರ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ 49 ಪ್ರಯಾಣಿಕರನ್ನು ಹೊತ್ತು 'ಜಬ್ಬಾರ್ ಟ್ರಾವೆಲ್ಸ್'ಗೆ ಸೇರಿದ ವೋಲ್ವೋ ಬಸ್ (AP 02 TA 0963) ಬೆಂಕಿಗೆ ಆಹುತಿಯಾಗಿ 45 ಮಂದಿ ಸಜೀವ ದಹನವಾಗಿದ್ದರು. ನಂತರವೂ ಬಸ್‌ಗಳ ವಿನ್ಯಾಸ ಮತ್ತು ಸುರಕ್ಷತಾ ಕ್ರಮಗಳಲ್ಲಿ ಮಹತ್ವದ ಸುಧಾರಣೆಗಳು ಆಗದಿರುವುದು ದುರಂತದ ಸಂಗತಿ.

