Union Budget 2025 | ಹೆಚ್ಚಲಿಲ್ಲ ಹೂಡಿಕೆ;  ಫಲ ಕೊಡದ ಕಾರ್ಪೊರೇಟ್ ತೆರಿಗೆ ಕಡಿತ
x
ಆರ್ಥಿಕ ಸಮೀಕ್ಷೆಯ ವಿಶ್ಲೇಷಣೆ

Union Budget 2025 | ಹೆಚ್ಚಲಿಲ್ಲ ಹೂಡಿಕೆ; ಫಲ ಕೊಡದ ಕಾರ್ಪೊರೇಟ್ ತೆರಿಗೆ ಕಡಿತ

ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು ಹಾಗೂ ಸವಾಲುಗಳ ಒಳನೋಟಗಳ ಕುರಿತು ʼದಿ ಫೆಡರಲ್ʼ ಪ್ರಧಾನ ಸಂಪಾದಕರಾದ ಎಸ್.ಶ್ರೀನಿವಾಸನ್ ಅವರ ವಿಶ್ಲೇಷಣೆ ಇಲ್ಲಿದೆ.


2024-25 ನೇ ಸಾಲಿನ ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆಗೆ ನೀಲನಕ್ಷೆ ಒದಗಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.3 ರಿಂದ 6.8 ವರೆಗಿನ ಆರ್ಥಿಕ ಬೆಳವಣಿಗೆಯ ದರದ ನಿರೀಕ್ಷೆಯನ್ನು ಸಮೀಕ್ಷೆ ಒಳಗೊಂಡಿದೆ. ಆದಾಗ್ಯೂ, ಖಾಸಗಿ ಹೂಡಿಕೆಗಳು ಮಂದಗತಿಯಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿ ಬಂಡವಾಳ ಹೂಡಿಕೆಯ ಬೇಡಿಕೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಹಣದುಬ್ಬರವು ದೈನಂದಿನ ಖರ್ಚುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಆರ್ಥಿಕ ಸಮೀಕ್ಷೆಯಿಂದ ತಿಳಿದುಬಂದಿದೆ.

ʼದಿ ಫೆಡರಲ್ʼ ಪ್ರಧಾನ ಸಂಪಾದಕರಾದ ಎಸ್.ಶ್ರೀನಿವಾಸನ್ ಅವರು ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು ಹಾಗೂ ಸವಾಲುಗಳ ಕುರಿತು ಇಲ್ಲಿ ವಿಶ್ಲೇಷಿಸಿದ್ದಾರೆ.

ಕೃತಕ ಬುದ್ದಿಮತ್ತೆ(AI) ಹಾಗೂ ಉದ್ಯೋಗ ಭದ್ರತೆ

“ಆರ್ಥಿಕ ಸಮೀಕ್ಷೆಯು AI ಉದ್ಯೋಗಗಳನ್ನು ಬದಲಾಯಿಸುವ ಬದಲು ವೃದ್ಧಿಸಲಿದೆ. ಇದರಿಂದ ಕೆಲವು ಉದ್ಯೋಗಗಳು ಅನಗತ್ಯ ಎನಿಸಬಹುದು. AI ದಕ್ಷತೆ ಹೆಚ್ಚಲಿದೆ. ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಇದರ ಸವಾಲುಗಳನ್ನು ಎದುರಿಸಲು ಮರುಕೌಶಲ ಪ್ರಮುಖ ಎನಿಸಿದೆ” ಎಂದು ಶ್ರೀನಿವಾಸನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಮತ್ತು ಎಂಜಿನಿಯರಿಂಗ್ ಮೇಲೆ ಹೆಚ್ಚು ಗಮನ ಹರಿಸುವ ಭಾರತದ ಕಾರ್ಯಪಡೆಯು, ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಅಗತ್ಯವನ್ನು ಸಮೀಕ್ಷೆ ಬೊಟ್ಟು ಮಾಡಿದೆ.



ಹಣದುಬ್ಬರ ಮತ್ತು ಶ್ರೀಸಾಮಾನ್ಯ

ಹಣದುಬ್ಬರ ನಿಯಂತ್ರಣದಲ್ಲಿದೆ ಎಂಬ ಹೇಳಿಕೆಯ ಹೊರತಾಗಿಯೂ, ಟೊಮೆಟೊ ಮತ್ತು ದ್ವಿದಳ ಧಾನ್ಯಗಳಂತಹ ಅಗತ್ಯ ವಸ್ತುಗಳು ದುಬಾರಿಯಾಗಿವೆ.

"ಸಿಪಿಐ (ಗ್ರಾಹಕ ಬೆಲೆ ಸೂಚ್ಯಂಕ) ದೈನಂದಿನ ಅಗತ್ಯ ವಸ್ತುಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ತೀವ್ರ ಬೇಸಿಗೆ ಅಥವಾ ಮಳೆಗಾಲದಂತಹ ಕಾಲೋಚಿತ ಅಡಚಣೆಗಳು ಬೆಲೆ ಏರಿಳಿತದಲ್ಲಿ ದೊಡ್ಡ ಪಾತ್ರ ವಹಿಸುತ್ತವೆ" ಎಂದು ಶ್ರೀನಿವಾಸನ್ ಅವರು ಹೇಳುತ್ತಾರೆ.

“TOPS (ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಸರಬರಾಜು ಸರಪಳಿ) ನಂತಹ ಕ್ರಮಗಳು ಬೆಲೆಗಳನ್ನು ಸ್ಥಿರಗೊಳಿಸುವ ಗುರಿ ಹೊಂದಿವೆ. ಆದರೆ ಪ್ರಗತಿ ನಿಧಾನವಾಗಿದೆ” ಎಂಬುದು ಅವರ ವಿಶ್ಲೇಷಣೆ.

ಹೆಚ್ಚುತ್ತಿರುವ ವಸತಿ ವೆಚ್ಚಗಳು

ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ನಿರ್ಮಾಣ ದೂರದ ಕನಸಿನಂತೆ ಭಾಸವಾಗುತ್ತದೆ. ರೆಪೊ ದರಗಳಿಗೆ ಆರ್‌ಬಿಐನ ಎಚ್ಚರಿಕೆ ವಿಧಾನ ಮತ್ತು ದರಗಳನ್ನು ಸಡಿಲಿಸುವ ಹಣಕಾಸು ಸಚಿವಾಲಯದ ಒತ್ತಡದಿಂದ ಏರ್ಪಟ್ಟಿರುವ ಸಂಘರ್ಷವನ್ನು ಶ್ರೀನಿವಾಸನ್ ಅವರು ಉಲ್ಲೇಖಿಸಿದ್ದಾರೆ.

"ಹಣಕಾಸಿನ ಶಿಸ್ತು ಬೆಳವಣಿಗೆ ಕೇಂದ್ರಿತವಾದ ನೀತಿಗಳೊಂದಿಗೆ ಹೊಂದಿಕೆಯಾಗದಿದ್ದರೆ ಬಡ್ಡಿದರಗಳು ಹೆಚ್ಚಾಗಬಹುದು" ಎಂದು ಕಂಡುಕೊಂಡಿದ್ದಾರೆ.

ಕಾರ್ಪೊರೇಟ್ ಲಾಭ ವರ್ಸಸ್ ವೇತನ

ದೊಡ್ಡ ಕಂಪನಿಗಳು ಶೇ 22-24 ರಷ್ಟು ದಾಖಲೆಯ ಲಾಭಾಂಶ ವರದಿ ಮಾಡಿವೆ. ಆದರೆ, ನೌಕರರಿಗೆ ನೀಡುವ ವೇತನವು ಕೇವಲ ಶೇ 1.5 ರಷ್ಟು ಮಾತ್ರ ಹೆಚ್ಚಿದೆ. ಈ ಅಸಮತೋಲನವನ್ನು ಶ್ರೀನಿವಾಸನ್ ಅವರು ಎತ್ತಿ ತೋರಿಸಿದ್ದಾರೆ.

"ಹೂಡಿಕೆ ಹೆಚ್ಚಿಸುವ ಗುರಿಯೊಂದಿಗೆ ಕಾರ್ಪೊರೇಟ್ ಕಂಪನಿಗಳ ತೆರಿಗೆ ಕಡಿತ ಮಾಡಿದ್ದರಿಂದ ಯಾವುದೇ ಫಲ ಸಿಕ್ಕಿಲ್ಲ. ಇದರಿಂದ ಬಳಕೆ ಕಡಿಮೆಯಾಗಿದೆ. ಖಾಸಗಿ ವಲಯವು ಪ್ರಸ್ತುತ ಆರ್ಥಿಕ ವಾತಾವರಣದಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನೂ ಹೊಂದಿಲ್ಲ” ಎಂದು ಹೇಳಿದ್ದಾರೆ.

ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ(ಜಿಸಿಸಿ) ಇಂಧನ ಪರಿವರ್ತನೆ ಹಾಗೂ AI

“2030 ರ ವೇಳೆಗೆ ನವೀಕರಿಸಬಹುದಾದ ಇಂಧನದಿಂದ ಶೇ 50 ರಷ್ಟು ಗುರಿ ಸಾಧನೆ ಹೊಂದಿರುವ ಭಾರತದ ಬದ್ಧತೆಯನ್ನು ಸಮೀಕ್ಷೆ ಒತ್ತಿ ಹೇಳುತ್ತಿದೆ. ಆದಾಗ್ಯೂ, ಸೌರ ಘಟಕಗಳ ಆಮದಿಗೆ ಭಾರತವು ಇನ್ನೂ ಚೀನಾವನ್ನೇ ಅವಲಂಬಿಸಿದೆ. ಗುರಿ ಪೂರೈಸಲು ಹೂಡಿಕೆ ಮತ್ತು ತಂತ್ರಜ್ಞಾನ ನವೀಕರಣಗಳು ನಿರ್ಣಾಯಕ ಪಾತ್ರ ವಹಿಸಲಿವೆ” ಎಂದು ಶ್ರೀನಿವಾಸನ್ ಹೇಳುತ್ತಾರೆ.

ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕೆಲ ಕಾರ್ಯಗಳಿಗೆ AI ಅಡ್ಡಿಪಡಿಸಬಹುದು. ಆದರೆ, ಜಾಗತಿಕ ಕಚೇರಿ ಕೇಂದ್ರಿತವಾಗಿ ಭಾರತದ ಸಾಮರ್ಥ್ಯ ಬಲವಾಗಿದೆ. ನಾವು AI ಅನ್ನು ಬದಲಾಯಿಸಲಾಗದ ಕ್ಷೇತ್ರಗಳಾದ ಸೃಜನಶೀಲ ಸಮಸ್ಯೆ ಪರಿಹಾರದಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸಿನ ಶಿಸ್ತು ಹಾಗೂ ಉಚಿತ ಕೊಡುಗೆ

ಶೇ 4.8 ರಷ್ಟು ಕೊರತೆಯೊಂದಿಗೆ ಹಣಕಾಸಿನ ಶಿಸ್ತು ಕಾಯ್ದುಕೊಂಡಿದ್ದಕ್ಕಾಗಿ ಶ್ರೀನಿವಾಸನ್ ಅವರು ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಆದರೂ, ಹಣಕಾಸಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಚುನಾವಣೆ, ಉಚಿತ ಕೊಡುಗೆಗಳು ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

“ಉಚಿತ ಕೊಡುಗೆಗಳಿಂದಾಗಿ ಮಧ್ಯಮ ವರ್ಗದ ಮೇಲೆ ಭಾರ ಹೆಚ್ಚಲಿದೆ. ಹಾಗಾಗಿ ಸಮತೋಲನ ಸಾಧಿಸುವುದು ಅತಿ ಮುಖ್ಯ" ಎಂದು ಒತ್ತಿ ಹೇಳುತ್ತಾರೆ.

ಆರ್ಥಿಕ ಸಮೀಕ್ಷೆಯು ದೇಶದ ಮಹತ್ವಾಕಾಂಕ್ಷೆ ಮತ್ತು ಸವಾಲುಗಳನ್ನು ಬಹಿರಂಗಪಡಿಸಿದೆ. AI ಗೆ ಹೊಂದಿಕೊಳ್ಳುವುದು, ಹಣದುಬ್ಬರ ನಿಭಾಯಿಸುವುದು ಅಥವಾ ಇಂಧನ ಗುರಿ ಸಾಧಿಸುವುದು ಸವಾಲಾಗಿದೆ. ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ಹೀಗಿರುವಾಗ ಭಾರತದ ಬೆಳವಣಿಗೆಯು ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯೊಂದಿಗೆ ಸಮತೋಲನಗೊಳ್ಳುವುದೇ ಎಂಬ ಪ್ರಶ್ನೆ ಎದುರಾಗಿದೆ.

Read More
Next Story