Constitution Day Duties Strengthen Democracy, PM Modi Writes to the Nation
x

ಸಂವಿಧಾನ ಪುಸ್ತಕಕ್ಕೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸಿದರು.

ಸಂವಿಧಾನ ದಿನ: ಕರ್ತವ್ಯಗಳೇ ಪ್ರಜಾಪ್ರಭುತ್ವದ ಬಲ; ದೇಶದ ಜನತೆಗೆ ಪ್ರಧಾನಿ ಮೋದಿ ಪತ್ರ

'ವಿಕಸಿತ್ ಭಾರತ'ದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.


Click the Play button to hear this message in audio format

ಸಂವಿಧಾನ ದಿನದ (ನವೆಂಬರ್ 26) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಪತ್ರ ಬರೆದಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಂವಿಧಾನಿಕ ಕರ್ತವ್ಯಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ. ಹಕ್ಕುಗಳಷ್ಟೇ ಕರ್ತವ್ಯಗಳೂ ಮುಖ್ಯ ಎಂದು ಪ್ರತಿಪಾದಿಸಿರುವ ಅವರು, 'ವಿಕಸಿತ್ ಭಾರತ'ದ ನಿರ್ಮಾಣಕ್ಕೆ ಕರ್ತವ್ಯ ಪ್ರಜ್ಞೆಯೇ ಅಡಿಪಾಯ ಎಂದು ಬಣ್ಣಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ ಮಾತುಗಳನ್ನು ಸ್ಮರಿಸಿರುವ ಮೋದಿ, "ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವುದರಿಂದಲೇ ಹಕ್ಕುಗಳು ಹುಟ್ಟುತ್ತವೆ. ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಡಿಪಾಯ," ಎಂದು ಹೇಳಿದ್ದಾರೆ. ಮುಂದಿನ ಪೀಳಿಗೆಯ ಭವಿಷ್ಯವು ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ರೂಪಿಸುವ ನೀತಿಗಳ ಮೇಲೆ ನಿಂತಿದೆ. ಆದ್ದರಿಂದ, 'ವಿಕಸಿತ್ ಭಾರತ'ದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಯುವ ಮತದಾರರಿಗೆ ಗೌರವ

ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮತದಾನದ ಪಾತ್ರ ಹಿರಿದು. ಶಾಲಾ-ಕಾಲೇಜುಗಳಲ್ಲಿ 18 ವರ್ಷ ತುಂಬುವ ಮೂಲಕ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುತ್ತಿರುವ ಯುವಕರನ್ನು ಗೌರವಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಇದರಿಂದ ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ದಾರ್ ಪಟೇಲ್, ಬಿರ್ಸಾ ಮುಂಡಾ ಸ್ಮರಣೆ

ಈ ಬಾರಿಯ ಸಂವಿಧಾನ ದಿನ ವಿಶೇಷವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಸಂದರ್ಭ ಇದಾಗಿದೆ. ಪಟೇಲ್ ಅವರ ದಕ್ಷತೆ ಮತ್ತು ದೂರದೃಷ್ಟಿಯಿಂದಾಗಿಯೇ ಆರ್ಟಿಕಲ್ 370 ಮತ್ತು 35(A) ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಯಿತು ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ, ಈ ವರ್ಷ ವಂದೇ ಮಾತರಂನ 150ನೇ ವಾರ್ಷಿಕೋತ್ಸವ ಮತ್ತು ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿವಸವನ್ನೂ ಆಚರಿಸಲಾಗುತ್ತಿದೆ.

ಸಾಮಾನ್ಯನಿಗೂ ಅಧಿಕಾರ ನೀಡಿದ ಸಂವಿಧಾನ

"ಅತ್ಯಂತ ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ನನ್ನಂತಹ ವ್ಯಕ್ತಿ, ಕಳೆದ 24 ವರ್ಷಗಳಿಂದ ನಿರಂತರವಾಗಿ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು ನಮ್ಮ ಸಂವಿಧಾನದ ಶಕ್ತಿಯಿಂದಲೇ," ಎಂದು ಮೋದಿ ಭಾವುಕರಾಗಿ ಬರೆದಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದಾಗ ಸಂಸತ್ ಭವನದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಕ್ಷಣ ಮತ್ತು 2019ರಲ್ಲಿ ಸಂವಿಧಾನದ ಪ್ರತಿಯನ್ನು ಹಣೆಗೆ ಸ್ಪರ್ಶಿಸಿ ಗೌರವಿಸಿದ ಕ್ಷಣಗಳನ್ನು ಅವರು ಸ್ಮರಿಸಿದ್ದಾರೆ.

Read More
Next Story